ಬೇಡ್ತಿ ನದಿ ನೀರಿನ ಹರಿವನ್ನು ತಡೆಯುವುದರಿಂದ ಮತ್ತು ನದಿಯ ನೀರನ್ನು ಬೇರೆಡೆ ತಿರುಗಿಸುವುದರಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಬೇಡ್ತಿ,ವರದಾ ನದಿ ಜೋಡಣೆ ಯೋಜನೆಗೆ ನಮ್ಮೆಲ್ಲರ ವಿರೋಧ ಇದೆ. ಯೋಜನೆಯ ವಿರೋಧದ ಧ್ವನಿ ಇನ್ನಷ್ಟು ಗಟ್ಟಿಯಾಗಲಿ ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಯಲ್ಲಾಪುರ ತಾಲೂಕಿನ ತುಂಬೇಬೀಡಿನಲ್ಲಿ ಬೇಡ್ತಿ,ವರದಾ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ರವಿವಾರ ನಡೆದ ಬೃಹತ್ ಪ್ರತಿಭಟನೆ ಹಾಗೂ ಜನಜಾಗೃತಿ ಸಮಾವೇಶವನ್ನು ವೃಕ್ಷಾರೋಪಣ ಮಾಡುವ ಮೂಲಕ ಉದ್ಘಾಟಿಸಿ, ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಬೇಡ್ತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ ಎಂಬ ಭಾವನೆ ಸರಿಯಲ್ಲ. ನದಿಯ ನೀರು ಇಲ್ಲಿಯೇ ಸದ್ಬಳಕೆ ಆಗಬೇಕು. ಈ ಪ್ರದೇಶದ ಕುಡಿಯುವ ನೀರಿನ ಉದ್ದೇಶಕ್ಕೆ ಹಾಗೂ ಕೃಷಿಗೆ ಬೇಡ್ತಿ ನದಿ ನೀರು ಅಗತ್ಯ ಇದೆ. ಬೇಡ್ತಿ ನದಿಯ ನೀರನ್ನು ಬೇರೆಡೆಗೆ ಕೊಂಡೊಯ್ದರೆ ಘಟ್ಟದ ಮೇಲಿನ ಪ್ರದೇಶದ ಕೃಷಿ ಭೂಮಿ ಹಾಗೂ ಘಟ್ಟದ ಕೆಳಗಿನ ಪ್ರದೇಶಗಳ ಕೃಷಿ ಭೂಮಿಗೆ ಹಾನಿಯಾಗುತ್ತದೆ.

ಈ ಯೋಜನೆಯನ್ನು ವಿರೋಧಿಸಿ ಪಕ್ಷಾತೀತವಾಗಿ ಹೋರಾಟ ಆಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿಯೋಗದ ಮೂಲಕ ತೆರಳಿ ಈ ಯೋಜನೆಯನ್ನು ವಿರೋಧಿಸುವ ಕುರಿತು ಮನವಿ ಸಲ್ಲಿಸಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಭೇಟಿಯಾಗಿ ಈ ಯೋಜನೆ ದುಷ್ಪರಿಣಾಮಗಳನ್ನು ತಿಳಿಸಬೇಕು. ಯೋಜನೆಯನ್ನು ವಿರೋಧಿಸಿ ವೈಜ್ಞಾನಿಕ ಆಧಾರದಲ್ಲಿ ಹೋರಾಟವಾಗಬೇಕು.

ಜನಾಂದೋಲನ ಸಂಘಟಿಸಬೇಕು, ಕಾನೂನು ಹೋರಾಟವನ್ನು ನಡೆಸಬೇಕು. ಹೀಗೆ ವ್ಯವಸ್ಥಿತವಾದ ಹೋರಾಟದ ಮೂಲಕ ಯೋಜನೆಯನ್ನು ಹಿಮ್ಮೆಟ್ಟಿಸಬೇಕು ಎಂದು ಶ್ರೀಗಳು ನುಡಿದರು. ಎತ್ತಿನಹೊಳೆ ಯೋಜನೆಯಿಂದ ಯಾವುದೇ ಪ್ರಯೋಜನ ಆಗದಿರುವ ನಿದರ್ಶನ ನಮ್ಮ ಕಣ್ಣಮುಂದೆ ಇರುವಾಗ ಮತ್ತೊಮ್ಮೆ ಇದೇ ರೀತಿಯ ಬೇಡ್ತಿ,ವರದಾ ನದಿ ಜೋಡಣೆ ಯೋಜನೆಯ ವ್ಯರ್ಥ ಪ್ರಯತ್ನಕ್ಕೆ ಕೈಹಾಕುವುದು ಸರಿಯಲ್ಲ ಎಂದರು.

ಬೇಡ್ತಿ,ವರದಾ ನದಿ ಜೋಡಣೆ ಯೋಜನೆಯ ವಿಸ್ತ್ರತ ಯೋಜನಾ ವರದಿ(ಡಿ.ಪಿ.ಆರ್.) ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯೋಜನೆಯ ಡಿ.ಪಿ.ಆರ್. ಇನ್ನೂ ಆಗಿಲ್ಲ ಎಂಬ ವಿಷಯ ನಮ್ಮ ಗಮನಕ್ಕೆ ಬಂದಿದೆ. ಕೇವಲ ಬೇಡ್ತಿ,ವರದಾ ನದಿ ಜೋಡಣೆ ಯೋಜನೆಗೆ ಮಾತ್ರವಲ್ಲ, ಅಘನಾಶನಿ,ವೇದಾವತಿ ನದಿ ಜೋಡಣೆ ಯೋಜನೆ ಮತ್ತು ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆಗೂ ನಮ್ಮ ತೀವೃ ವಿರೋಧ ಇದೆ ಎಂದು ಶ್ರೀಗಳು ತಿಳಿಸಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿವಿದೆಡೆ ನಡೆಯಲಿರುವ ಹೋರಾಟಗಳಿಗೂ ಜನ ಬೆಂಬಲ ಸಿಗುವಂತಾಗಲಿ ಎಂದು ಶ್ರೀಗಳು ಆಶಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈಗಾಗಲೆ ಅನೇಕ ಯೋಜನೆಗಳಿಂದ ನಲುಗಿದ ನಮ್ಮ ಜಿಲ್ಲೆಯಲ್ಲಿ ಮತ್ತೊಮ್ಮೆ ವಿವಿಧ ಯೋಜನೆಗಳು ಪ್ರಸ್ತಾಪವಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಜನರ ತ್ಯಾಗವನ್ನು ಗುರುತಿಸಿ ಸಹಾಯ ಮಾಡುವ ಕೆಲಸ ಸಕಾರಗಳಿಂದ ಇನ್ನೂ ಆಗಿಲ್ಲ. ಮೊದಲು ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನವಾಗಬೇಕು.

ಇಲ್ಲಿನ ಪರಿಸರಕ್ಕೆ, ಅಭಿವೃದ್ಧಿ ಯೋಜನೆಗಳು ಇಲ್ಲಿನ ಪ್ರಕೃತಿಗೆ ಪೂರಕವಾಗಿರಬೇಕೇ ವಿನಃ ಮಾರಕವಾಗಿರಬಾರದು. ಬೇಡ್ತಿ,ವರದಾ ನದಿ ಜೋಡಣೆ ಯೋಜನೆಯ ವಿರುದ್ಧ ಜನಾಭಿಪ್ರಾಯ ಬಲಗೊಳ್ಳಬೇಕು. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ ಎಂದರು.

ಪ್ರಮುಖರಾದ ಅನಂತ ಹೆಗಡೆ ಆಶೀಸರ, ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್.ಹೆಗಡೆ, ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ, ಪರಿಸರ ತಜ್ಞ ಬಾಲಚಂದ್ರ ಸಾಯಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಪಾದ ಹೆಗಡೆ ಶಿರ್ನಾಲಾ ಶ್ರೀಗಳಿಗೆ ಫಲ ಸಮರ್ಪಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಜನರು ಸಭೆಗೆ ಆಗಮಿಸಿದ್ದರು. ರವಿವಾರ ಬೆಳಿಗ್ಗೆ ಹಲವು ಜನರು ಬೈಕ್ ರ‍್ಯಾಲಿಯ
ಮೂಲಕ ಸಮಾವೇಶಕ್ಕೆ ಆಗಮಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading