ಯಲ್ಲಾಪುರ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಾಲಯದಲ್ಲಿ 12ನೇ ವರ್ಷದ ಕಾರ್ತಿಕೋತ್ಸವ ಹಾಗೂ ಭಗವದ್ಗೀತಾ ಅಭಿಯಾನಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.

ಸ್ಪಂದನ ಯುವಕ ಸಂಘ, ಆದರ್ಶ ಮಹಿಳಾ ಸಂಘ ಹಾಗೂ ದೇವಾಲಯದ ಆಡಳಿತ ಮಂಡಳಿ ಇವುಗಳ ಆಶ್ರಯದಲ್ಲಿ ಹದಿನೈದು ದಿನ ನಡೆಯುವ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾ ಜ್ಞಾನಯಜ್ಞದ ಪ್ರಧಾನ ಗುರುಗಳಾದ ಕಾಸರಗೋಡಿನ ಸುಬ್ರಾಯ ನಂದೋಡಿ ಮಾತನಾಡಿ, ಭಗವದ್ಗೀತೆಯು ಜಗತ್ತಿನ ಎಲ್ಲೆಡೆ ವ್ಯಾಪಿಸಿದೆ. ಮನುಷ್ಯನ ಅಸಮಾಧಾನ, ಮನಸ್ಸಿನ ಅಶಾಂತಿಯನ್ನು ಹೋಗಲಾಡಿಸುವ ಶಕ್ತಿ ಭಗವದ್ಗೀತೆಗೆ ಇದೆ. ಗೀತೆಯು ಬದುಕಿನ ಮಾರ್ಗದರ್ಶಿಯಾಗಿದೆ ಎಂದರು.

ನಮಗೆ ಎದುರಾಗುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಬೇಕು, ನಕಾರಾತ್ಮಕ ಚಿಂತನೆಯಿಂದ ಸೋಲು ಉಂಟಾಗುತ್ತದೆ. ಸಕಾರಾತ್ಮಕ ಚಿಂತನೆಯಿಂದ ಜೀವನದಲ್ಲಿ ಗೆಲುವು ಸಾಧಿಸಬಹುದು. ಭಗವಂತನು ನಮಗೆ ಎಲ್ಲವನ್ನೂ ಕೊಟ್ಟಿದ್ದರೂ ನಮ್ಮ ಅಜ್ಞಾನದಿಂದ ಎಲ್ಲವುಗಳನ್ನೂ ಪರರಿಂದ ಬೇಡುವಂತಾಗಿದೆ. ಹಣದಿಂದ ಮಾತ್ರ ಸುಖ ಎಂಬ ಭ್ರಮೆಯಲ್ಲಿ ಇದ್ದೇವೆ. ಇದು ಸತ್ಯವಲ್ಲ, ಅನ್ನ, ವಿದ್ಯೆ, ಔಷಧ ಇವುಗಳು ಮಾರಾಟಕ್ಕಾಗಿ ಅಲ್ಲ. ಆದರೆ ಇಂದು ಇವು ಮಾರಾಟದ ಸರಕುಗಳಾಗಿ, ಬೃಹತ್ ಉದ್ಯಮಗಳಾಗಿ ಮಾರ್ಪಟ್ಟಿವೆ.

ಪರೋಪಕಾರ ಇರಲಿ, ಪರಪೀಡೆ ಸಲ್ಲ ಎಂದ ಅವರು, ಗೀತೆಯ ಆರಾಧನೆಯಿಂದ ನೆಮ್ಮದಿ ಸಾಧ್ಯವಿದೆ. ಎಲ್ಲರ ಮನೆಯಲ್ಲಿ ನಿತ್ಯ ಗೀತಾ ಪಠಣ ಹಾಗೂ ಮಂಗಲ ಸಂವಾದ ನಡೆಯಲಿ ಎಂದರು. ವಿದ್ವಾಂಸರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ಯಜ್ಞ, ದಾನ, ತಪಃ , ಕರ್ಮದಿಂದ ಮತ್ತು ಭಗವದ್ಗೀತೆಯ ಪಠಣದಿಂದ ಜೀವನ ಸಾರ್ಥಕವಾಗುತ್ತದೆ. ಇವುಗಳು ನಮ್ಮ ಕರ್ತವ್ಯಗಳು ಎಂದು ಪರಿಭಾವಿಸಬೇಕು, ಆಧ್ಯಾತ್ಮಿಕ ಭಾವನೆ ಎಲ್ಲೆಡೆ ಜಾಗೃತವಾಗಲಿ ಎಂದರು.

ಭಗವದ್ಗೀತಾ ಅಭಿಯಾನದ ತಾಲೂಕಾ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡುವ ದೀಪಾರಾಧನೆಯ ಜೊತೆಯಲ್ಲಿ ಜೀವನ ಸಾರ್ಥಕ್ಯಕ್ಕೆ ಕಾರಣವಾಗುವ ಭಗವದ್ಗೀತೆಯ ಆರಾಧನೆಯು ಶಕ್ತಿಗಣಪತಿ ದೇವಾಲಯದಲ್ಲಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಪ್ರತಿನಿತ್ಯ ಮನೆಯಲ್ಲಿ ಭಗವದ್ಗೀತೆಯ ಪಠಣದಿಂದ ಸಂಸ್ಕಾರಯುತ ಹಾಗೂ ನೆಮ್ಮದಿಯ ಬದುಕು ನಮ್ಮದಾಗುತ್ತದೆ. ಈ ಮೂಲಕ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯವಿದೆ. ಮನುಕುಲಕ್ಕೆ ಭಗವಂತನ ದೊಡ್ಡ ಕೊಡುಗೆಯಾದ ಭಗವದ್ಗೀತೆಯನ್ನು ಶ್ರದ್ಧೆಯಿಂದ ಆರಾಧಿಸುವುದು ನಮ್ಮ ಜೀವನದ ಉನ್ನತಿಗೆ ಕಾರಣವಾಗುತ್ತದೆ ಎಂದರು.

ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಮಾತನಾಡಿದರು. ಸಂಘಟನೆಯ ಸುಬ್ರಾಯ ಭಟ್ಟ ಹಂಡ್ರಮನೆ, ಬಿ.ಎನ್.ಹೆಗಡೆ, ಶಾಂತಲಾ ಹೆಗಡೆ, ಡಿ.ವಿ.ಹೆಗಡೆ ಮುಂತಾದವರು ಇದ್ದರು. ಪ್ರಭಾತ ಭಟ್ಟ ಪ್ರಾರ್ಥಿಸಿದರು. ಉಷಾ ಗಾಂವ್ಕಾರ್ ಸ್ವಾಗತಿಸಿದರು. ಶಿಕ್ಷಕ ಸುಬ್ರಾಯ ಭಟ್ಟ ನಿರ್ವಹಿಸಿದರು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಅನಂತ ಗಾಂವ್ಕಾರ್ ಕಂಚೀಪಾಲ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಆನಗೋಡ ಗಣಪತಿಕಟ್ಟೆಯ ಮಹಾಗಣಪತಿ ಭಜನಾ ಮಂಡಳಿಯ ಸದಸ್ಯೆಯರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading