ಭಾರತದ ಬಾಹ್ಯಾಕಾಶ ಸಾಧನೆ ಜಗತ್ತಿಗೆ ಮಾದರಿ: ಬಿಇಒ ರೇಖಾ ನಾಯ್ಕ
ವಿದ್ಯಾರ್ಥಿಗಳು ಮೂಲ ವಿಜ್ಞಾನದ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮೂಲ ವಿಜ್ಞಾನದಲ್ಲಿಯ ಸಂಗತಿಗಳನ್ನು ಅಧ್ಯಯನ ಮಾಡಿ ಸಂಶೋಧನೆಗಳನ್ನು ಮಾಡಿ ವಿಜ್ಞಾನಿಗಳಾದರೆ ಜಗತ್ತಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ರೇಖಾ ನಾಯ್ಕ ಹೇಳಿದರು.
ಯಲ್ಲಾಪುರ ಪಟ್ಟಣದ ಹೋಲಿರೋಜರಿ ಪ್ರೌಢಶಾಲೆಯಲ್ಲಿ ಸೋಮವಾರ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದವರು ಆಯೋಜಿಸಿದ್ದ ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಂತ ವಿಫುಲ ಅವಕಾಶಗಳನ್ನು ಹೊಂದಿರುವಂತಹ ಬಾಹ್ಯಾಕಾಶದ ಮತ್ತು ಪರಮಾಣು ವಿಜ್ಞಾನದ ಬಗ್ಗೆ ಅಧ್ಯಯನಗಳನ್ನು ಮಾಡುವುದು ತುಂಬಾ ಅವಶ್ಯಕವಾಗಿದೆ. ಭಾರತದ ಬಾಹ್ಯಾಕಾಶದ ಸಾಧನೆ ಇಂದು ಜಗತ್ತಿಗೆ ಮಾದರಿಯಾಗಿದೆ ಕೆಲವೇ ಕೆಲವು ದೇಶಗಳು ಸಾಧಿಸಿದ ಸಾಧನೆಗಳನ್ನ ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತು ಅಣು ವಿದ್ಯುತ್ ಕ್ಷೇತ್ರದಲ್ಲಿ ಸಾಧಿಸಿದೆ. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದ ಮಾಹಿತಿಗಳನ್ನು ಪ್ರತಿದಿನವೂ ಅಳವಡಿಸಿಕೊಂಡು ಅದರಿಂದ ಬದುಕನ್ನ ಹಸನುಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಜಯ ನಾಯಕ್ ಹಾಗೂ ಚಂದ್ರಶೇಖರ, ಪ್ರಶಾಂತ್, ನಿತೀಶ ತೊರ್ಕೆ ಉಪಸ್ಥಿತರಿದ್ದರು. ತಾಲೂಕಿನ 25 ಪ್ರೌಢ ಶಾಲೆಗಳಿಂದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ವಿಜ್ಞಾನ ಬಳಗದ ಅಧ್ಯಕ್ಷ ರಾಜಶೇಖರ ಎಂ ಕಾರ್ಯಕ್ರಮ ನಿರ್ವಹಿಸಿದರು. ವಿಜ್ಞಾನ ಶಿಕ್ಷಕ ಗಜಾನನ ಭಟ್ಟ ಸ್ವಾಗತಿಸಿದರು. ಸರೋಜಾ ಭಟ್ ವಂದಿಸಿದರು.