ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ, ವಿಜೃಂಭಣೆಯಿಂದ ನಡೆಯುತ್ತಿದೆ.

ವಿದ್ವಾನ್ ವಾಸುದೇವ ಭಟ್ಟ ಹಂದಲಸು ಅವರು ಪ್ರತಿದಿನ ಮಧ್ಯಾಹ್ನ ಶ್ರೀಮದ್ಭಾಗವತದ ಹತ್ತನೇ ಸ್ಕಂದದ ಪ್ರವಚನ ನೀಡುತ್ತಿದ್ದಾರೆ. ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಹೊರ ಭಾಗಗಳಿಂದ ನೂರಾರು ಭಕ್ತರು ಅತ್ಯಂತ ಶ್ರದ್ಧೆಯಿಂದ ಶ್ರೀಮದ್ಭಾಗವತ ಸಪ್ತಾಹದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಧನ್ಯರಾಗುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ ಶ್ರೀದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪುರುಷಸೂಕ್ತಪೂರ್ವಕ ಕ್ಷೀರಾಭಿಷೇಕ, ವೇದ ಪಾರಾಯಣ, ಶ್ರೀಮದ್ಭಾಗವತ ಮೂಲ ಗ್ರಂಥದ ಪಾರಾಯಣೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು, ಭಜನೆ ಮುಂತಾದವು ನಡೆಯುತ್ತಿವೆ.

ಬುಧವಾರ ಗೀತಾ ಜ್ಞಾನಯಜ್ಞದ ಮಾತೆಯರಿಂದ ಸಂಪೂರ್ಣ ಭಗವದ್ಗೀತಾ ಪಾರಾಯಣ ನಡೆಯಿತು.

ಅಣಲಗಾರ ಶ್ರೀಗೊಪಾಲಕೃಷ್ಣ ದೇವಾಲಯದಲ್ಲಿ ಖ್ಯಾತ ಕಲಾವಿದರಿಂದ ಮಂಗಳವಾರ ರಾತ್ರಿ ನಡೆದ ಸತ್ಯವಾನ ಸಾವಿತ್ರಿ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಮದ್ದಳೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಗಣೇಶ ಗಾಂವ್ಕಾರ್ ಕನಕನಹಳ್ಳಿ, ಸಂಗೀತದಲ್ಲಿ ದರ್ಶನ ಆಚಾರಿ ಪಾಲ್ಗೊಂಡಿದ್ದರು. ಮುಮ್ಮೇಳದಲ್ಲಿ ಯಮನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಸತ್ಯವಾನನಾಗಿ ಗಣಪತಿ ಹೆಗಡೆ ತೋಟಿಮನೆ, ಸಾವಿತ್ರಿಯಾಗಿ ಶಂಕರ ಹೆಗಡೆ ನೀಲ್ಕೋಡು, ನಾರದನಾಗಿ ವಿಘ್ನೇಶ್ವರ ಹಾವಗೋಡಿ, ಅಶ್ವಪತಿಯಾಗಿ ನಾಗೇಂದ್ರ ಕುಳಿಮನೆ, ಚಿತ್ರಗುಪ್ತನಾಗಿ ನಾಗೇಂದ್ರ ಮೂರೂರು, ದೂತನಾಗಿ ರಾಮ ಪಟಗಾರ ಪಾತ್ರಚಿತ್ರಣ ನೀಡಿದರು.

ಯಕ್ಷಗಾನ ಸಂಘಟಕ ವಿಶ್ವನಾಥ ಭಟ್ಟ ತಟ್ಟಿಗದ್ದೆ ತಮ್ಮ ತಾಯಿ ದಿ. ಕಾವೇರಿ ಮಹಾಬಲೇಶ್ವರ ಭಟ್ಟ ಅವರ ಸ್ಮರಣಾರ್ಥವಾಗಿ ಈ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ್ದರು. ನೂರಾರು ಪ್ರೇಕ್ಷಕರು ಯಕ್ಷಗಾನವನ್ನು ವಿಕ್ಷಿಸಿ ಸಂತಸಪಟ್ಟರು. ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಸ್ವಾಗತಿಸಿ, ನಿರ್ವಹಿಸಿದರು.

ಶ್ರೀಮದ್ಭಾಗವತ ಸಪ್ತಾಹವು ಅ.31ರಂದು ಮುಕ್ತಾಯವಾಗಲಿದೆ. ಅಂದು ಮಧ್ಯಾಹ್ನ ಸ್ವರ್ಣವಲ್ಲೀ ಶ್ರೀಗಳು ದೇವಾಲಯಕ್ಕೆ ಆಗಮಿಸಲಿದ್ದಾರೆ. ಶ್ರೀಗುರು ಪಾದಪೂಜೆ, ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading