ಸ್ವರ್ಣವಲ್ಲೀ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಅಣಲಗಾರಿನಲ್ಲಿ ಶ್ರೀಮದ್ಭಾಗವತ ಸಪ್ತಾಹ ಸಂಪನ್ನ
ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹದ ಸಮಾರೋಪ ಸಮಾರಂಭವು ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಹಾಗೂ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಶುಕ್ರವಾರ ಸಂಪನ್ನಗೊಂಡಿತು.
ದೇವಾಲಯಕ್ಕೆ ಆಗಮಿಸಿದ ಉಭಯ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಗೋಪಾಲಕೃಷ್ಣ ದೇವರ ದರ್ಶನ ಪಡೆದ ಉಭಯ ಶ್ರೀಗಳು ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿ, ಶ್ರೀಮದ್ಭಾವತವು ಭಗವತ್ ತತ್ವಗಳನ್ನು ಪ್ರಧಾನವಾಗಿ ಹೊಂದಿರುವ ಗ್ರಂಥವಾಗಿದೆ. ಮಹಾಭಾರತವು ಧರ್ಮದ ತತ್ವದ ಗ್ರಂಥವಾಗಿದೆ. ಶ್ರಿಮದ್ಬಾಗವತದಲ್ಲಿ ಬೇರೆ, ಬೇರೆ ರೀತಿಯಲ್ಲಿ ಭಗವಂತನ ವರ್ಣನೆಯನ್ನು ಬೇರೆ ಪಾತ್ರಗಳ ಮೂಲಕ ಮಾಡಲಾಗಿದೆ.
ಭಗವಂತನ ಸಂಕಲ್ಪವು ನಮ್ಮ ಊಹೆಗೂ ಮೀರಿದ್ದದಾಗಿದೆ. ಭಗವಂತನ ಸಗುಣ ಸಾಕಾರ ದರ್ಶನ ಈ ಗ್ರಂಥದಲ್ಲಿದೆ. ಭಾಗವತದಲ್ಲಿ ಅನೇಕ ಸಲ ಭಗವಂತನ ವಿಶ್ವರೂಪ ದರ್ಶನ ಆಗಿದೆ. ಪ್ರತಿದಿನ ಭಾಗವತದ ಪಾರಾಯಣ ಮಾಡಿದರೆ ವಿಶೇಷ ಫಲ ಲಭಿಸುತ್ತದೆ ಎಂದರು.
ಶ್ರೀಮದ್ಭಾಗವತ ಸಪ್ತಾಹವು ಅಣಲಗಾರಿನಲ್ಲಿ ನಡೆದದ್ದು ವಿಶೇಷ ಮತ್ತು ಐತಿಹಾಸಿಕವಾಗಿದೆ. ಯಲ್ಲಾಪುರ ಸೀಮೆಯ ಜನರ ಭಕ್ತಿ ಶ್ರದ್ಧೆ ದೊಡ್ಡದು, ಇದರಿಂದಾಗಿ ಇಂತಹ ಕಾರ್ಯ ಇಲ್ಲಿ ನಡೆದಿದೆ. ಈ ದೇವಾಲಯವು ಗೋಪಾಲಕೃಷ್ಣನ ಸಾನ್ನಿಧ್ಯದಿಂದಾಗಿ ಮಹತ್ವದ ಸ್ಥಳವಾಗಿದೆ. : ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಶ್ರೀಗಳ ಪಾದಪೂಜೆ ನಡೆಯಿತು. ಲಕ್ಷ್ಮೀ ಮತ್ತು ಗೋಪಾಲಕೃಷ್ಣ ಭಟ್ಟ ದಂಪತಿಗಳು ಹಾಗೂ ಶ್ರೀಧರ ಅಣಲಗಾರ ಪೂಜೆ ನೆರವೇರಿಸಿದರು. ನೂರಾರು ಭಕ್ತರು ಉಪಸ್ಥಿತರಿದ್ದರು. ನಾರಾಯಣ ಭಟ್ಟ ಬಿದ್ರೆಪಾಲ್ ಹಾಗೂ ಆಡಳಿತ ಮಂಡಳಿಯವರು ಶ್ರೀಗಳಿಗೆ ಫಲಸಮರ್ಪಣೆ ಮಾಡಿದರು.