ಬುದ್ಧಿ ಸರಿಯಾಗಿದ್ದರೆ ಬದುಕು ಸರಿಯಾಗಿರುತ್ತದೆ, ನಿರಂತರವಾಗಿ ಭಗವಂತನ ನಾಮ ಸ್ಮರಣೆ ಮಾಡುವ ಬುದ್ಧಿ ನಮ್ಮದಾದರೆ ನಮ್ಮ ಜೀವನವೂ ಸಾರ್ಥಕವಾಗುತ್ತದೆ ಎಂದು ಶಿರಳಗಿ ರಾಜಾರಾಮಾಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ನುಡಿದರು.

ಯಲ್ಲಾಪುರ ಪಟ್ಟಣದ ಗಾಂಧಿ ಕುಟೀರದಲ್ಲಿ ರವಿವಾರ ರಾತ್ರಿ ಮೂರನೇ ದಿನದ ಸಂಕಲ್ಪ ಉತ್ಸವವನ್ನು ಉದ್ಘಾಟಿಸಿದ ಅವರು, ಮಾತನಾಡಿ, ನಿತ್ಯ ಜೀವನದಲ್ಲಿ ಭಗವಂತನ ನಾಮಸ್ಮರಣೆ, ಆರಾಧನೆಯಿಂದ ಭದ್ರತೆ, ಶಾಂತಿ, ನೆಮ್ಮದಿ ಸಿಗುತ್ತದೆ, ಇಹದಲ್ಲಿ ಸುಖ ಪರದಲ್ಲಿ ಮೋಕ್ಷ ಲಭಿಸುತ್ತದೆ. ಸನಾತನ ಧರ್ಮ ಯಾರ ಉಕ್ತಿಯಲ್ಲ, ಒಬ್ಬ ವ್ಯಕ್ತಿ ಸನಾತನ ಧರ್ಮದ ಮೂಲ ಅಲ್ಲ, ಎಂದೆಂದಿಗೂ ಉಳಿಯುವುದು ಸನಾತನ ಧರ್ಮವಾಗಿದೆ ಎಂದರು.

ಸ್ವಾರ್ಥ ಚಿಂತನೆ ಬಿಟ್ಟು, ಸಮಾಜಕ್ಕಾಗಿ ಯೋಚನೆ ಮಾಡುವವರು ಈ ಕಾಲದಲ್ಲಿ ತುಂಬಾ ಕಡಿಮೆ, ಆದರೆ ಪ್ರಮೋದ ಹೆಗಡೆಯವರು ಸಾಮಾಜಿಕ ಚಿಂತನೆಯೊಂದಿಗೆ 38 ವರ್ಷಗಳಿಂದ ಸಂಕಲ್ಪ ಉತ್ಸವವನ್ನು ನಡೆಸಿಕೊಂಡುಬಂದಿರುವುದು ಶ್ಲಾಘನೀಯವಾಗಿದೆ. ಕಲೆಯ ಮೂಲಕ ಆರ್ಷ ಸತ್ಯ ಕಾಣುತ್ತೇವೆ, ನಿರಂತರವಾಗಿ ಈ ಉತ್ಸವ ನಡೆಯಲಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ ಮಾತನಾಡಿ, ಸಂಕಲ್ಪ ಉತ್ಸವವು ನಮ್ಮ ರಾಜ್ಯಕ್ಕೆ ಹೆಮ್ಮೆಯ ಕಾರ್ಯಕ್ರಮ, ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ, ಈ ಉತ್ಸವದ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಮುಂದಿನ ವರ್ಷದಿಂದ ಶಿರಸಿಯಲ್ಲಿ ಇಂತಹ ಉತ್ಸವವನ್ನು ಆಯೋಜಿಸಲಾಗುವುದು ಎಂದರು.

ಪ್ರಮೋದ ಹೆಗಡೆ, ಬೀರಣ್ಣ ನಾಯಕ ಮೊಗಟಾ, ಪಿ.ಜಿ. ಹೆಗಡೆ, ಪಿ.ಜಿ.ಭಟ್ಟ ವಡ್ರಮನೆ ಮುಂತಾದವರು ಇದ್ದರು. ಪತ್ರಕರ್ತರಾದ ಸುಬ್ರಾಯ ಗಾಂವ್ಕಾರ್ ಹಾಗೂ ನರಸಿಂಹ ಸಾಸ್ಮೆಗದ್ದೆ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸಾದಿನಿ ಭಟ್ಟ ಪ್ರಾರ್ಥಿಸಿದರು. ಡಾ.ರವಿ ಭಟ್ಟ ಬರಗದ್ದೆ ಸ್ವಾಗತಿಸಿದರು. ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading