ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಸ್ಥಾಪನೆಯಾಗಿ 550 ವರ್ಷಗಳನ್ನು ಪೂರೈಸಿದ ಸವಿನೆನಪಿನಲ್ಲಿ ಸಂಸ್ಥಾನದ ಆರಾಧ್ಯ ದೇವತೆಯಾದ ಶ್ರೀರಾಮ ದೇವರ 77 ಅಡಿ ಎತ್ತರದ ಕಂಚಿನ ಪ್ರತಿಮೆ ಪರ್ತಗಾಳಿಯಲ್ಲಿ ಅನಾವರಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬದರಿಕಾಶ್ರಮದಿಂದ ಹೊರಟ ಭವ್ಯವಾದ ಸಾಲಂಕೃತ ರಥವು ಹಲವು ರಾಜ್ಯಗಳನ್ನು ಸಂಚರಿಸಿ, ನ.4ರಂದು ಸಂಜೆ 4.30 ಗಂಟೆಗೆ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಲಿದೆ.

ಪಟ್ಟಣದ ಗ್ರಾಮದೇವಿ ದೇವಾಲಯದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ರಥಯಾತ್ರೆ ಆರಂಭವಾಗಿ ವೆಂಕಟರಮಣ ಮಠದ ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಪೂಜೆ ಮಂಗಳಾರತಿ ಸ್ವೀಕರಿಸಿ ಮಠದ ಆವರಣದಲ್ಲಿ ತಂಗಲಿದೆ. ಶ್ರೀ ವೆಂಕಟರಮಣ ದೇವಾಲಯದ ಆವರಣದಲ್ಲಿ ವಿಧ್ಯುಕ್ತ ಪೂಜೆ ಮಹಾ ಮಂಗಳಾರತಿ ನಡೆದು ಪ್ರಸಾದ ವಿತರಣೆಯಾಗಲಿದೆ.

ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ದ್ವೈತ ಸಿದ್ಧಾಂತದ ವೈಷ್ಣವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮೊದಲ ವೈಷ್ಣವ ಪರಂಪರೆಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಉತ್ತರಾಖಂಡದ ಬದರಿಕಾಶ್ರಮದಲ್ಲಿ ಕ್ರಿ.ಶ. 1475ರಲ್ಲಿ ಆರಂಭವಾಗಿ ಈ ವರ್ಷ 550 ವರ್ಷಗಳನ್ನು ಪೂರೈಸುತ್ತಿದ್ದು, ಅದರ ಸ್ಮರಣಾರ್ಥ ಸಾರ್ಧ ಪಂಚಶತಾಬ್ದಿ ಮಹೋತ್ಸವವನ್ನು ಶ್ರೀಮಠದ ವತಿಯಿಂದ ಆಚರಿಸಲಾಗುತ್ತಿದೆ.

ಮಠದ ಪೀಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರ ಅನುಜ್ಞೆಯಂತೆ ದೇಶಾದ್ಯಂತ ನೆಲೆಸಿರುವ ಜಿಎಸ್‍ಬಿ ಸಮಾಜದ ಶಿಷ್ಯ ವರ್ಗದವರು ತಾವು ವಾಸವಾಗಿರುವ ಊರುಗಳಲ್ಲಿ ಜಪ ಕೇಂದ್ರಗಳನ್ನು ತೆರೆದು ಪ್ರತಿನಿತ್ಯ ಶ್ರೀರಾಮ ತಾರಕ ಮಂತ್ರದ ಜಪಾನುಷ್ಠಾನ ನಡೆಸಿ ಶ್ರೀಗಳ ಅಪೇಕ್ಷೆಯಂತೆ 550 ದಿನಗಳಲ್ಲಿ 550 ಕೋಟಿ ರಾಮನಾಮ ತಾರಕ ಜಪಪಠನವನ್ನು ಸಂಪೂರ್ಣಗೊಳಿಸಿ ಇನ್ನೂ ಜಪಾನುಷ್ಠಾನ ನಡೆಸುತ್ತಿದ್ದಾರೆ. ನಾಡಿನಾದ್ಯಂತದ ಸುಮಾರು 119 ಜಪಕೇಂದ್ರಗಳಲ್ಲಿ ಜಪಾನುಷ್ಠಾನ ಈಗಲೂ ಮುಂದುವರಿದಿದ್ದು ಸುಮಾರು 600 ಕೋಟಿಗೆ ಹತ್ತಿರವಾಗಿದೆ.

ಇದಕ್ಕೆ ಪೂರಕವಾಗಿ ಶ್ರೀಗಳು ಶ್ರೀಮಠ ಆರಂಭವಾದ ಬದರಿಕಾಶ್ರಮ ಕ್ಷೇತ್ರಕ್ಕೆ ಹೋಗಿ ಬದರೀನಾಥನ ದರ್ಶನ ಪೂಜೆಗೈದು ಅಲ್ಲಿಂದ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ರಥವು ಬದರಿಯಿಂದ ಹೊರಟು ಕಾಶಿ, ಅಯೋಧ್ಯಾ, ಗಯಾ, ದೇವಪ್ರಯಾಗ, ಅಮರಾವತಿ, ನಾಶಿಕ, ಮುಂತಾದ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ ಪ್ರಸ್ತುತ ಮುಂಬೈ ನಗರವನ್ನು ಪ್ರವೇಶಿಸಿದೆ. ಶ್ರೀಗಳೂ ಸಹಿತ ಮುಂಬೈವರೆಗೆ ಈ ರಥದೊಂದಿಗೇ ಪ್ರಯಾಣಿಸಿದ್ದಾರೆ.

ಅಲ್ಲಿಂದ ಶ್ರೀಗಳು ಮೂಲಮಠ ಪರ್ತಗಾಳಿಗೆ ತೆರಳಿದ್ದಾರೆ. ಶ್ರೀರಾಮದಿಗ್ವಿಜಯ ರಥ ಕರ್ನಾಟಕವನ್ನು ಪ್ರವೇಶಿಸಿ ರಾಜ್ಯಾದ್ಯಂತ ಇರುವ ಶ್ರೀರಾಮನಾಮ ಜಪಕೇಂದ್ರಗಳನ್ನು ಸಂದರ್ಶಿಸಿ ಆಯಾ ಊರಿನ ಸಮಾಜ ಬಾಂಧವರಿಂದ ಪೂಜೆ ಪುನಸ್ಕಾರಗಳನ್ನು ಪಡೆದು ಸಾಗುತ್ತಾ ನವೆಂಬರ್ 26ರಂದು ಪರ್ತಗಾಳಿ ಮಠವನ್ನು ತಲುಪಲಿದೆ.

ಪ್ರಸ್ತುತ ಈ ರಥಯಾತ್ರೆಯು ನವೆಂಬರ್ 4ರಂದು ಯಲ್ಲಾಪುರಕ್ಕೆ ಆಗಮಿಸಲಿದ್ದು, ಪಟ್ಟಣದ ಶ್ರೀವೆಂಕಟರಮಣ ಮಠದ ಜಪಕೇಂದ್ರದಲ್ಲಿ ದರ್ಶನ ನೀಡಲಿದೆ. ರಥವನ್ನು ವಿಜೃಂಭಣೆಯಿಂದ ಬರಮಾಡಿಕೊಳ್ಳಲು ತಾಲೂಕಿನ ಸಮಾಜ ಬಾಂಧವರು ಸಿದ್ಧತೆ ನಡೆಸಿದ್ದಾರೆ. ದೀಪಾಲಂಕಾರದಿಂದ ಶೋಭಿತವಾದ ಈ ರಥದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾಮಾತೆ ಹಾಗೂ ರಾಮಭಕ್ತ ಹನುಮಂತರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಶ್ರೀ ಸಂಸ್ಥಾನ ಪರ್ತಗಾಳಿ ಜೀವೋತ್ತಮ ಮಠವು ಪ್ರಾರಂಭವಾಗಿ 550 ವರ್ಷಗಳು ಸಂಪನ್ನವಾಗಿರುವುದರಿಂದ ನ. 27ರಿಂದ ಡಿ. 7ರ ವರೆಗೆ ಪರ್ತಗಾಳಿಯಲ್ಲಿ ಪ್ರತಿಷ್ಠಾ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ವೈಭವಪೂರ್ಣವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಪ್ರತಿನಿತ್ಯ ಸುಮಾರು ಒಂದು ಲಕ್ಷ ಭಕ್ತರು ಭಾಗವಹಿಸುವ ಅಂದಾಜು ಮಾಡಲಾಗಿದೆ. ದೂರದಿಂದ ಬರುವ ಭಕ್ತರ ವಸತಿಗೆ ಯೋಗ್ಯ ಸೌಲಭ್ಯಗಳು, ಊಟೋಪಚಾರದ ವ್ಯವಸ್ಥೆಯನ್ನೂ ಶ್ರೀಮಠ ಸಮಿತಿಯಿಂದ ಕೈಗೊಳ್ಳಲಾಗಿದೆ. ಸೇವಾ ಸೌಲಭ್ಯ ನೀಡಲು ಪ್ರತಿಯೊಂದು ಊರಿನಿಂದಲೂ ಸಾವಿರಾರು ಸ್ವಯಂ ಸೇವಕರು ಬಂದು ಕರಸೇವೆ ನೀಡಲು ಸಿದ್ಧತೆ ನಡೆಸಿದ್ದಾರೆ. ದೇಶ ವಿದೇಶಗಳಿಂದ ಶ್ರೀ ಪರ್ತಗಾಳಿ ಮಠದ ಶಿಷ್ಯವರ್ಗದವರು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading