ಸಾಧನೆಗೆ ಇಚ್ಛಾಶಕ್ತಿಯ ಜೊತೆ ಸಮಾಜದ ಪ್ರೋತ್ಸಾಹವೂ ಅಗತ್ಯ: ಡಾ.ನಾರಾಯಣ ಹುಳ್ಸೆ
ಯಾವುದೇ ಸಾಧನೆ ಮಾಡಲು ಇಚ್ಛಾಶಕ್ತಿಯ ಜೊತೆ ಸಮಾಜದ ಪ್ರೋತ್ಸಾಹವೂ ಅಗತ್ಯ. ನಿರಂತರವಾಗಿ ನಮ್ಮ ಕರ್ತವ್ಯವವನ್ನು ನಾವು ಮಾಡಿದರೆ ಗುರಿ ಸಾಧನೆ ಸುಲಭವಾಗುತ್ತದೆ ಎಂದು ಮೂಲತಃ ಯಲ್ಲಾಪುರ ತಾಲೂಕಿನ ಮಲವಳ್ಳಿಯವರಾದ, ಖ್ಯಾತ ಎಲುಬು ಮತ್ತು ಕೀಲು ತಜ್ಞ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ನಾರಾಯಣ ಹುಳ್ಸೆ ಹೇಳಿದರು.
ಯಲ್ಲಾಪುರ ಪಟ್ಟಣದ ಗಾಂಧಿಕುಟೀರದಲ್ಲಿ ಮಂಗಳವಾರ ಸಂಜೆ ಸಂಕಲ್ಪ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಹುಟ್ಟೂರಿನಲ್ಲಿ ನಡೆದ ಇಂತಹ ಸನ್ಮಾನ ಅವಿಸ್ಮರಣೀಯವಾದದ್ದು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಸೆಲ್ಕೋ ಕಂಪನಿಯ ಸಿಇಒ ಮೋಹನ ಹೆಗಡೆ ಮಾತನಾಡಿ, ಸಾಂಸ್ಕೃತಿಕಗಂಧವನ್ನು ನಾಡಿನೆಲ್ಲೆಡೆ ಪಸರಿಸುತ್ತಿರುವ ಸಂಕಲ್ಪ ಉತ್ಸವದ ರೂವಾರಿ ಪ್ರಮೋದ ಹೆಗಡೆಯವರ ಕಾರ್ಯ ಬಹಳ ಮಹತ್ವದ್ದು ಎಂದರು.
ವೇದಿಕೆಯಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಲ್.ಪಿ.ಭಟ್ಟ ಗುಂಡ್ಕಲ್, ದತ್ತಾತ್ರೇಯ ಗಾಂವ್ಕರ್, ನಂದು ಗಾಂವ್ಕಾರ್, ಗಣಪತಿ ಬೋಳಗುಡ್ಡೆ, ಎಸ್.ಎನ್.ಭಟ್ಟ, ಮಹಾಬಲೇಶ್ವರ ಹುಳ್ಸೆ, ಡಿ.ಶಂಕರ ಭಟ್ಟ, ಕ್ಯಾನ್ಸರ್ ತಜ್ಞ ಡಾ.ರಮೇಶ, ಪ್ರಸಾದ ಹೆಗಡೆಮುಂತಾದವರು ಇದ್ದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸೀತಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಡಿ.ಎನ್.ಗಾಂವ್ಕಾರ್ ಸ್ವಾಗತಿಸಿದರು. ಶಿಕ್ಷಕ ರಾಜಶೇಖರ ಎಂ. ನಿರ್ವಹಿಸಿದರು.