ಯಲ್ಲಾಪುರ ಪಟ್ಟಣ ಪಂಚಾಯತಿ ಸಭೆ: ಅವ್ಯವಸ್ಥೆಯ ಬಗ್ಗೆ ಗಂಭೀರ ಚರ್ಚೆ
ಯಲ್ಲಾಪುರ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯು ಬುಧವಾರ ಪ.ಪಂ.ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ರಾಧಾಕೃಷ್ಣ ನಾಯ್ಕ ಮಾತನಾಡಿ, ಅಂಗನವಾಡಿ ಕಟ್ಟಡದ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಗುತ್ತಿಗೆದಾರರೊಬ್ಬರು ಪಟ್ಟಣ ಪಂಚಾಯತಿ ಸದಸ್ಯರೊಬ್ಬರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇಂತಹ ಅಹಿತಕರ ಘಟನೆ ನಡೆಯಬಾರದಿತ್ತು. ಇದು ಖಂಡನೀಯವಾಗಿದೆ. ಯಾವುದೇ ಕಾರಣಕ್ಕೂ ಸದಸ್ಯರ ಗೌರವಕ್ಕೆ ಕುಂದಾಗಬಾರದು ಎಂದರು.
ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾತನಾಡಿ, ಈ ಘಟನೆಯ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದು, ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸುತ್ತೇನೆ ಎಂದರು. ಈ ವಿಷಯವಾಗಿ ಪಟ್ಟಣ ಪಂಚಾಯತಿ ಸದಸ್ಯರ ನಡುವೆ ಪರ, ವಿರೋಧ ಚರ್ಚೆ ನಡೆಯಿತು.
ಪಟ್ಟಣ ಪಂಚಾಯತಿ ಕಾರ್ಯಾಲಯದ ಅವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಪಟ್ಟಣ ಪಂಚಾಯತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಲಿಫ್ಟ್ ಕೆಟ್ಟಿದೆ. ವಿವಿಧ ಕಾಮಗಾರಿಗೆಂದು ಬಂದಿರುವ ವಸ್ತುಗಳು ಹಾಳಾಗುತ್ತಿವೆ, ಪಟ್ಟಣದಲ್ಲಿಬೀದಿ ದೀಪಗಳ ವ್ಯವಸ್ಥೆ ಸರಿಯಾಗಿಲ್ಲ ಎಂದು ಸದಸ್ಯರು ಧ್ವನಿಎತ್ತಿದರು. ಒಂದು ವಾರದೊಳಗೆ ಇವೆಲ್ಲವುಗಳನ್ನೂ ಸರಿಪಡಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.ಸಭೆಯಲ್ಲಿ ಎಲ್ಲ ಸದಸ್ಯರು ಉಪಸ್ಥಿತರಿದ್ದರು.