ಕನ್ನಡ ಸಾಹಿತ್ಯಲೋಕಕ್ಕೆ ಕುವೆಂಪು ಮತ್ತು ಬೇಂದ್ರೆಯವರ ಕೊಡುಗೆ ಅಪಾರ: ಡಾ. ಡಿ.ಕೆ.ಗಾಂವ್ಕರ್
ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೇಷ್ಠ ಸಾಹಿತಿಗಳಾದ ಕುವೆಂಪು ಮತ್ತು ದ.ರಾ.ಬೇಂದ್ರೆಯವರ ಕೊಡುಗೆ ಅಪಾರವಾಗಿದೆ ಎಂದು ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಕೆ.ಗಾಂವ್ಕರ್ ಹೇಳಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಾಯ್.ಟಿ.ಎಸ್.ಎಸ್. ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ವಾಯ್.ಟಿ.ಎಸ್.ಎಸ್. ಸಭಾಭವನದಲ್ಲಿ ನಡೆದ ಕನ್ನಡ ಕಾರ್ತಿಕ-2025 ಅನುದಿನ ಅನುಸ್ಪಂದನ ಕಾರ್ಯಕ್ರಮದಲ್ಲಿ ಕನ್ನಡ ಕಾವ್ಯಯಾನ ವಿಷಯದ ಬಗ್ಗೆ ಕುವೆಂಪು ಹಾಗೂ ಬೇಂದ್ರೆಯವರ ಕೃತಿಗಳ ಕುರಿತು ಉಪನ್ಯಾಸ ನೀಡಿದ ಅವರು,
ಮಹಾನ್ ಲೇಖಕರಾದ ರಾಷ್ಟ್ರಕವಿ ಕುವೆಂಪು ಮತ್ತು ವರಕವಿ ದ.ರಾ. ಬೇಂದ್ರೆ ಇಬ್ಬರೂ ಸಾಹಿತ್ಯ ದೃಷ್ಟಿಯಿಂದ ಸಮಾನರು, ಕುವೆಂಪು ಅವರು ಸಂಸ್ಕೃತಭೂಯಿಷ್ಠವಾದ ಶಬ್ದಗಳ ಮೂಲಕ ಸಾಹಿತ್ಯವನ್ನು ಕಟ್ಟಿಕೊಟ್ಟರೆ, ದ.ರಾ.ಬೇಂದ್ರೆಯವರು ಉತ್ತರಕರ್ನಾಟಕದ ಆಡುಭಾಷೆಯ ಮೂಲಕ ಸಾಹಿತ್ಯ ರಚನೆ ಮಾಡಿದ್ದಾರೆ. ಈ ಇಬ್ಬರು ಶೇಷ್ಠ ಸಾಹಿತಿಗಳ ಬರವಣಿಗೆಯಲ್ಲಿ ಅನೇಕ ಸಾಮ್ಯತೆಗಳು ಕಂಡುಬರುತ್ತವೆ. ಇವರು ಅನೇಕ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವಸ್ತುನಿಷ್ಠ ಸನ್ನಿವೇಶಗಳನ್ನು ಸೊಗಸಾಗಿ ಬಣ್ಣಿಸಿದ್ದಾರೆ. ಇಂತಹ ಲೇಖಕರ ಕೃತಿಗಳನ್ನು ಅಧ್ಯಯನ ಮಾಡುವುದು ಅಗತ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಾಯ್.ಟಿ.ಎಸ್.ಎಸ್. ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ ಮಾತನಾಡಿ, ನಮ್ಮ ಜಿಲ್ಲೆಯ ಹೆಸರಿನಲ್ಲೇ ಕನ್ನಡ ಇದೆ, ಜಿಲ್ಲೆಯಲ್ಲಿ ಕನ್ನಡ ಭಾಷೆಯ ಜೊತೆಗೆ ಇತರ ಭಾಷೆಗಳು ಬೆಳೆದಿವೆ. ಕನ್ನಡವು ಪುರಾತನ ಭಾಷೆಯಾಗಿದ್ದು, ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿ ಇದೆ, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಪ್ರಾಂಶುಪಾಲ ಆನಂದ ಹೆಗಡೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ ತಟ್ಟಿಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಸಾದಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಮನೋಹರ ಶಾನಭಾಗ ವಂದಿಸಿದರು. ಉಪನ್ಯಾಸಕ ರವೀಂದ್ರ ಗಾಂವ್ಕಾರ್ ನಿರ್ವಹಿಸಿದರು.