ಭಗವದ್ಗೀತೆಯು ನಮ್ಮ ಜೀವನಕ್ಕೆ ಮಾರ್ಗದರ್ಶಿಯಾಗಿದೆ. ಸನ್ಮಾರ್ಗದಿಂದ ಮುನ್ನೆಡೆಯಲು ಭಗವದ್ಗೀತೆ ಪ್ರೇರಣೆ ನೀಡುತ್ತದೆ ಎಂದು ದುಬೈನ ಅಬುಧಾಬಿ ನಗರದ ಬ್ರಾಹ್ಮಣ ಸಭಾದ ಪ್ರಮುಖ ಅನಂತ ಭಟ್ಟ ಬಾಲೀಗದ್ದೆ ಹೇಳಿದರು.
ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲಾ ಸಭಾಭವನದಲ್ಲಿ ರವಿವಾರ ನಡೆದ ಭಗವದ್ಗೀತಾ ಅಭಿಯಾನದ ತಾಲೂಕಾ ಮಟ್ಟದ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸನಾತನ ಧರ್ಮವು ಅವಿನಾಶಿ ಹಾಗೂ ನಿತ್ಯ ಸತ್ಯವಾಗಿದೆ. ನಮ್ಮ ಚಿತ್ತ ಶುದ್ಧಿ ಇದ್ದರೆ ನಮಗೆ ಭಗವಂತನ ಅನುಗ್ರಹ ದೊರೆಯುತ್ತದೆ. ಕೇವಲ ಹಣ ಗಳಿಸುವ ಉದ್ದೇಶದಿಂದ ಯಾವುದೇ ಕೆಲಸ ಮಾಡಿದರೂ ಅದು ನಮ್ಮ ಜೀವನಕ್ಕೆ ಸಾರ್ಥಕತೆಯನ್ನು ತರುವುದಿಲ್ಲ. ಭಗವದ್ಗೀತೆಯ ಸಂದೇಶಗಳನ್ನು ಜಿವನದಲ್ಲಿ ಅಳವಡಿಸಿಕೊಂಡರೆ ಜೀವನ ಧನ್ಯವಾಗುತ್ತದೆ. ಜ್ಞಾನದ ದರ್ಶನವಾಗುತ್ತದೆ. ಭಗವದ್ಗೀತೆಯನ್ನು ನಿತ್ಯ ಓದಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನಕ್ಕೆ ಈ ವರ್ಷ ಯಲ್ಲಾಪುರ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ತಾಲೂಕಿನಾದ್ಯಂತ 400 ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಭಿಯಾನ ರೂಪದಲ್ಲಿ ಗೀತಾ ಆರಾಧನೆ ಅತ್ಯಂತ ಉತ್ಸಾಹದಿಂದ ನಡೆದಿದೆ. ಈ ಮೂಲಕ ರಾಜ್ಯದಲ್ಲಿಯೇ ಅತೀ ಹೆಚ್ಚು ಕೇಂದ್ರಗಳಲ್ಲಿ ಅಭಿಯಾನ ನಡೆದ ತಾಲೂಕು ಎಂಬ ಹೆಗ್ಗಳಿಕೆಗೆ ಯಲ್ಲಾಪುರ ತಾಲೂಕು ಪಾತ್ರವಾಗಿದೆ. ನ.27ರಂದು ಯಲ್ಲಾಪುರದಲ್ಲಿ ಭಗವದ್ಗೀತಾ ಅಭಿಯಾನದ ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನ.29ರಂದು ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಸ್ಫರ್ಧೆ ನಡೆಯಲಿದೆ. ನ.30ರಂದು ಶಿವಮೊಗ್ಗದ ಫ್ರೀಡಂ ಪಾರ್ಕ ನಲ್ಲಿ ಅಭಿಯಾನದ ರಾಜ್ಯ ಮಟ್ಟದ ಸಮರ್ಪಣಾ ಸಮಾರಂಭ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂದರು.
ವೇದಿಕೆಯಲ್ಲಿ ಭಗವದ್ಗೀತಾ ಅಭಿಯಾನದ ಪ್ರಮುಖರಾದ ಡಾ.ಶಂಕರ ಭಟ್ಟ ಬಾಲೀಗದ್ದೆ, ಕೆ.ಜಿ.ಬೋಡೆ, ಎಸ್.ವಿ.ಭಟ್ಟ, ಕೆ.ಟಿ.ಹೆಗಡೆ, ವಿ.ಟಿ.ಭಟ್ಟ, ದೇವಾಲಯದ ವ್ಯವಸ್ಥಾಪಕ ಎನ್.ಎಸ್.ಭಟ್ಟ, ಡಾ.ಶಿವರಾಮ ಭಾಗ್ವತ್, ರಮಾ ದೀಕ್ಷಿತ ಮುಂತಾದವರು ಇದ್ದರು. ಅಭಿಯಾನ ಸಮೀತಿಯ ಪ್ರಮುಖ ಲಕ್ಷ್ಮೀನಾರಾಯಣ ಗುಮ್ಮಾನಿ ನಿರ್ವಹಿಸಿದರು.