ನಿತ್ಯ ಜೀವನದಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಂಡರೆ ಶ್ರೇಷ್ಠ ಸಾಧನೆ ಮಾಡಲು ಸಾಧ್ಯವಿದೆ. ಜೀವನದಲ್ಲಿ ಚಮತ್ಕಾರ ನೋಡಬೇಕಾದರೆ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಯೋಗಗುರು, ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.
ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಸಂಜೆನಡೆದ ವಿಶ್ವದರ್ಶನ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ವಿಶ್ವದರ್ಶನ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನಿತ್ಯ ಜೀವನದಲ್ಲಿ ನಾವು ಯೋಗ, ಸ್ವದೇಶಿ ವಸ್ತುಗಳ ಬಳಕೆ, ಆಯುರ್ವೇದ, ಸನಾತನ ಧರ್ಮದ ಮೌಲ್ಯಗಳನ್ನು ಅನುಸರಿಸಿದರೆ ರಾಷ್ಟ್ರ ಸೇವೆಯನ್ನು ಮಾಡಿದಂತೆ ಎಂದ ಅವರು, ಸನಾತನ ಧರ್ಮವನ್ನು ನಂಬಿದವರಿಗೆ ಇದು ಪರ್ವ ಕಾಲವಾಗಿದೆ. ಸನಾತನ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಹಾಗೂ ಸನಾತನ ಪರಂಪರೆಯನ್ನು ಹೀಗಳೆಯುವ ದುಷ್ಟ ಶಕ್ತಿಗಳಿಗೆ ತಕ್ಕ ಉತ್ತರ ನೀಡಬೇಕು.
ಒಳ್ಳೆಯ ಶಿಕ್ಷಣದ ಜೊತೆ ಒಳ್ಳೆಯ ನಾಗರಿಕರಾಗುವುದೂ ಬಹಳ ಮುಖ್ಯವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮಹತ್ವದ ಜವಾಬ್ದಾರಿ ಪಾಲಕರ ಮೇಲಿದೆ. ಯೋಗಯುಕ್ತ, ರೋಗಮುಕ್ತ ಜೀವನ ನಮ್ಮದಾಗಲಿ ಎಂದು ಆಶಿಸಿದರು. ವಿಶ್ವದರ್ಶನ ವಿದ್ಯಾಲಯದಲ್ಲಿ ಉತ್ತಮವಾದ ಶಿಕ್ಷಣ ನೀಡಲಾಗುತ್ತಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯಲ್ಲಾಪುರದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ವಿಶ್ವದರ್ಶನ ಮಾಡುತ್ತಿದೆ, ಮಗುವಿನ ಕಲಿಕೆಗೆ ಕನ್ನಡ ಅಥವಾ ಇಂಗ್ಲೀಷ್ ಇವುಗಳಲ್ಲಿ ಯಾವ ಮಾಧ್ಯಮ ಎನ್ನುವುದು ಮುಖ್ಯವಲ್ಲ, ಕಲಿಕಾ ಕ್ರಮ, ಗುಣಮಟ್ಟದ ಶಿಕ್ಷಣ ಮುಖ್ಯ. ಕನ್ನಡ , ಇಂಗ್ಲೀಷ್ ಎರಡೂ ಮಾಧ್ಯಮದಲ್ಲಿ ಕಲಿಕೆಗೆ ಇಲ್ಲಿ ಅವಕಾಶ ಇಲ್ಲಿದೆ, ಕೌಶಲ್ಯ ಕಲಿಕೆ ಇಲ್ಲಿದೆ,
ಮಕ್ಕಳಿಗೆ ಇಂಗ್ಲೀಷ್ ಭಾಷೆ ಬೇಕು, ಇಂಗ್ಲೀಷ್ ಸಂಸ್ಕೃತಿ ಬೇಡ ಎಂದರು. ವಸತಿ ಸಹಿತ ಪಿಯು ಕಾಲೇಜು ಸೇರಿದಂತೆ ಅನೇಕ ಹೊಸ, ಹೊಸ ಶೈಕ್ಷಣಿಕ ಯೋಜನೆಗಳನ್ನು ಸಂಸ್ಥೆ ಜಾರಿಗೊಳಿಸುತ್ತಿದೆ. ಜನರು ಇವುಗಳ ಪ್ರಯೋಜನ ಪಡೆಯಬೇಕು, ಮುಂದಿನ ಐದು ವರ್ಷಗಳಲ್ಲಿಯಲ್ಲಾಪುರವು ಶಿಕ್ಷಣ ಕಾಶಿ ಆಗಲಿದೆ ಎಂದರು. ನಮ್ಮ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದ್ದು, ಇದರಿಂದ ಜಿಲ್ಲೆಯ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದರು.
ಹರಿಪ್ರಕಾಶ ಕೋಣೆಮನೆಯವರನ್ನು ಭವರಲಾಲ್ ಆರ್ಯ ಅವರು ಪತಂಜಲಿ ಯೋಗ ಸಮೀತಿಯಿಂದ ಸನ್ಮಾನಿಸಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕಕಾರ್ಯಕ್ರಮಗಳು ನಡೆದವು.
ಶನಿವಾರ ಮಧ್ಯಾಹ್ನ ಖ್ಯಾತ ಗಾಯಕ ಶಂಕರ ಶಾನುಭೋಗ ಅವರಿಂದ ಕಾವ್ಯ ಸಂಗೀತ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಬೀದರಿನ ಉದ್ಯಮಿ ಚನ್ನಬಸವಣ್ಣ ಬಳತೆ, ಪ್ರಮುಖರಾದ ನಾರಾಯಣ ಭಟ್ ಅಗ್ಗಾಶಿಕುಂಬ್ರಿ, ನಾರಾಯಣ ಯಾಜಿ, ನಾರಾಯಣ ಭಟ್ಟ ಏಕಾನ್, ಉಮೇಶ ಭಾಗ್ವತ್, ಶಿವಲಿಂಗಯ್ಯ ಅಲ್ಲಯ್ಯನವರಮಠ, ವಿಘ್ನೇಶ್ವರ ಗಾಂವ್ಕರ್, ಬಾಬು ಬಾಂದೇಕರ್, ಗೋಪಾಲಕೃಷ್ಣ ಗಾಂವ್ಕಾರ್, ರವಿ ಕೈಟ್ಕರ್ ಇದ್ದರು, ಸನ್ಮಾನಿತರಾದ ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮತ್ತು ಉದ್ಯಮಿ ರಾಮನಾಥ ಭಟ್ಟ ಮಾತನಾಡಿದರು.