ದೈವಜ್ಞ ಹಿತವರ್ಧಕ ಸಂಘ, ಜ್ಞಾನೇಶ್ವರಿ ಮಹಿಳಾ ಮಂಡಳ ಹಾಗೂ ಸರಾಫ್ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಯಲ್ಲಾಪುರ ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಸೋಮವಾರ ದೈವಜ್ಞ ದರ್ಶನ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ಈ ಸಮಾರಂಭವನ್ನು ಉದ್ಘಾಟಿಸಿದ ಕರ್ಕಿ ದೈವಜ್ಞ ಬ್ರಾಹ್ಮಣ ಮಠದ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಇದ್ದಾಗ ಮಾತ್ರ ಒಳ್ಳೆಯ ಕೆಲಸಗಳು ನಡೆಯುತ್ತವೆ. ಹೀಗಾಗಿ ನಮಗೆ ಸದಾ ಉತ್ತಮ ಚಿಂತನೆ ಇರಬೇಕು.

ಸಂಕುಚಿತ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಸುಶಿಕ್ಷಿತರಾದರೆ ಮಾತ್ರ ಸಾಲದು, ಸುಸಂಸ್ಕೃತರೂ ಆಗಬೇಕು, ಸದಾಚಾರ ಸಂಪನ್ನರಾಗಬೇಕು. ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವನ್ನು ನೀಡುವುದು ಪಾಲಕರ ಜವಾಬ್ದಾರಿಯಾಗಿದೆ ಎಂದರು.

ದೈವಜ್ಞ ಬ್ರಾಹ್ಮಣ ಸಮಾಜವು ಇನ್ನಷ್ಟು ಸಂಘಟಿತವಾಗಲಿ, ಗುರುಗಳ ಮತ್ತು ಶಿಷ್ಯರ ಬಾಂಧವ್ಯ ಹಾಗೂ ಮಠ ಮತ್ತು ಸಮಾಜದ ಬಾಂಧವ್ಯ ಇನ್ನಷ್ಟು ವೃದ್ಧಿಸಲಿ ಎಂದ ಅವರು ಯಲ್ಲಾಪುರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಸಭಾಭವನವನ್ನು ಕಟ್ಟುವ ಬಹುಕಾಲದ ಕನಸು ಶೀಘ್ರವೇ ನನಸಾಗಲಿ ಎಂದು ಆಶಿಸಿದರು.

ಜ್ಞಾನೇಶ್ವರಿ ಪೀಠದ ಕಿರಿಯ ಶ್ರೀಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಸದಾ ಸತ್ಯವನ್ನು ನುಡಿಯುತ್ತಾ ವಿನಮ್ರತೆಯನ್ನು ಮೈಗೂಡಿಸಿಕೊಂಡರೆ ಅಂತಹ ವ್ಯಕ್ತಿಯನ್ನು ಪ್ರಪಂಚ ಮತ್ತು ಸಮಾಜ ಗೌರವಿಸುತ್ತದೆ. ಹಣ,ಸಂಪತ್ತು, ಅಧಿಕಾರ ಇದೆ ಎಂದು ಅಹಂಕಾರದಿಂದ ನಡೆದುಕೊಂಡರೆ ಗೌರವದ ಸ್ಥಾನಮಾನ ಸಿಗುವುದಿಲ್ಲ, ಬಾಗಿ ನಡೆದರೆ ಭಾಗ್ಯವಂತನಾಗುತ್ತಾನೆ. ಅಹಂಕಾರದಿಂದ ಬೀಗಿ ನಡೆದರೆ ಭಿಕಾರಿಯಾಗುತ್ತಾನೆ ಎಂದ ಅವರು, ಭಗವಂತನ ಅನುಗ್ರಹ ಸದಾ ನಮ್ಮ ಮೇಲೆ ಇರಬೇಕೆಂದರೆ ನಾವು ಭಗವಂತನ ಆರಾಧನೆಯೊಂದಿಗೆ ಧರ್ಮಕ್ಕೆ ಪೂರಕವಾದ ಕೆಲಸಗಳನ್ನು ಮಾಡಬೇಕು ಎಂದರು.

ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷ ರವಿ ಗಾಂವ್ಕರ ಮಾತನಾಡಿ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ. ಯಲ್ಲಾಪುರದಲ್ಲಿ ನಮ್ಮ ಸಮಾಜಕ್ಕಾಗಿ ಸ್ವಂತ ಜಾಗ ಹೊಂದಿ, ಉತ್ತಮ ಕಲ್ಯಾಣ ಮಂಟಪ ನಿರ್ಮಿಸುವ ಕುರಿತು ಪ್ರಯತ್ನ ನಡೆಯುತ್ತಿದೆ ಎಂದರು.

ಯಲ್ಲಾಪುರದ ದೈವಜ್ಞ ಹಿತವರ್ಧಕ ಸಂಘದ ಅಧ್ಯಕ್ಷ ಸುಬ್ರಾಯ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಉದಯ ರಾಯ್ಕರ್, ಜಿಲ್ಲಾ ದೈವಜ್ಞ ವಾಹಿನಿಯ ಗೌರವಾಧ್ಯಕ್ಷ ಸುಧಾಕರ ರಾಯ್ಕರ್, ಸಂಚಾಲಕ ಸುರೇಶ ರಾಯ್ಕರ್, ಶಿರಸಿಯ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಭಾಕರ ವೆರ್ಣೆಕರ್, ಅಂಕೋಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ರೇವಣಕರ್,

ಶಿರಸಿಯ ದೈವಜ್ಞ ಮಹಿಳಾ ಮಂಡಳದ ಅಧ್ಯಕ್ಷೆ ಸವಿತಾ ಶೇಟ್, ಯಲ್ಲಾಪುರದ ಜ್ಞಾನೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಪೂಜಾ ಶೇಟ್, ಯಲ್ಲಾಪುರ ಸರಾಫ ಸಂಘದ ಅಧ್ಯಕ್ಷ ಸುರೇಶ ರೇವಣಕರ್, ಶಿರಸಿ ಸಂಘದ ಅಧ್ಯಕ್ಷ ವಿನಾಯಕ ಪಾವಸ್ಕರ್, ಸುವರ್ಣ ಕಲಾಕಾರ ಸಂಘದ ವಿನಾಯಕ ರೇವಣಕರ್, ಪ್ರಮುಖರಾದ ವಸಂತ ಅಣ್ವೆಕರ್, ರಾಮಚಂದ್ರ ಶೇಟ್, ಅನಿಲ ಚೂಡಣಕರ್, ಸೀತಾರಾಮ ರೇವಣಕರ್, ಪ್ರಕಾಶ ಶೇಟ್ ಹಾಗೂ ಸಮಾಜದ ನೂರಾರು ಬಂಧುಗಳು, ಮಾತೆಯರು ಉಪಸ್ಥಿತರಿದ್ದರು.

ಸಂಘದ ವತಿಯಿಂದ ಯತಿದ್ವಯರ ಪಾದಪೂಜೆ ನೆರವೇರಿಸಲಾಯಿತು.

ದೈವಜ್ಞ ದರ್ಶನ ಸಮಾರಂಭದ ನಿಮಿತ್ತ ಸುಜ್ಞಾನ ವಾಹಿನಿ ಪತ್ರಿಕೆಯಲ್ಲಿ ಸೋಮವಾರ ಪ್ರಕಟಗೊಂಡ 12 ಪುಟಗಳ ವರ್ಣಮಯ, ಆಕರ್ಷಕ, ಸಂಗ್ರಹಯೋಗ್ಯ ಪುರವಣಿ ಸಂಚಿಕೆಯನ್ನು ಉಭಯ ಶ್ರೀಗಳು ಹಾಗೂ ಗಣ್ಯರು ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು.

ಪುರವಣಿಯನ್ನು ವೀಕ್ಷಿಸಿದ ಯತಿದ್ವಯರು ಸಂತಸ ವ್ಯಕ್ತಪಡಿಸಿ, ಈ ಪುರವಣಿಯು ಸಮಾರಂಭಕ್ಕೆ ವಿಶೇಷ ಮೆರಗನ್ನು ನೀಡಿದೆ ಎಂದರು.

ಸುಜ್ಞಾನ ವಾಹನಿ ಸಂಪಾದಕರಾದ ಜಿ.ಎನ್.ಭಟ್ ತಟ್ಟಿಗದ್ದೆಯವರನ್ನು ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಜ್ಞಾನೇಶ್ವರಿ ಮಹಿಳಾ ಮಂಡಳದ ಸದಸ್ಯೆಯರು ಪ್ರಾರ್ಥಿಸಿದರು. ಎಂ.ಬಿ ಶೇಟ್, ಮಂಜುನಾಥ ರಾಯ್ಕರ್ ನಿರ್ವಹಿಸಿದರು.

ದೈವಜ್ಞ ದರ್ಶನ ಸಮಾರಂಭಕ್ಕೂ ಮುನ್ನ ಉಭಯ ಶ್ರೀಗಳನ್ನು ಪಟ್ಟಣದ ಮಾಗೋಡ ಕ್ರಾಸ್ ನಿಂದ ಯಲ್ಲಾಪುರದವರೆಗೆ ಬೈಕ್ ರ್ಯಾಲಿಯ ಮೂಲಕ ಸ್ವಾಗತಿಸಲಾಯಿತು.

ಗಾಂಧಿ ಚೌಕದಿಂದ ಎಪಿಎಂಸಿ ರೈತಭವನದವರೆಗೆ ಭವ್ಯ ಮೆರವಣಿಗೆಯ ಮೂಲಕ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಚಂಡೆವಾದನ, ಸ್ತಬ್ಧ ಚಿತ್ರಗಳು, ಸಾಂಪ್ರದಾಯಿಕ ನೃತ್ಯಗಳು ಗಮನ ಸೆಳೆದವು.

ಮಾತೆಯರು ಪೂರ್ಣಕುಂಭ ಸ್ವಾಗತಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading