ಮನೆ ಕಳ್ಳತನ, ಮೆಡಿಕಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ
ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ಪಕ್ಕದಲ್ಲಿರುವ ಮೆಡಿಕಲ್ ಅಂಗಡಿಯಲ್ಲಿ ಹಣವನ್ನು ಕಳ್ಳತನ ಮಾಡಿದ್ದ ಹಾಗೂ ತಾಲೂಕಿನ ಕಣ್ಣಿಗೇರಿ ಸಮೀಪದ ಸಾರಬೈಲ್ ನಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ಅಂಚಿನಲ್ಲಿರುವ ಮೆಡಿಕಲ್ ಶಾಪ್ ನ ಬಾಗಿಲನ್ನು ಮೀಟಿ, ಅಂಗಡಿಯಲ್ಲಿದ್ದ 45,000 ರೂ ಹಣವನ್ನು ಕದ್ದೊಯ್ದ ಘಟನೆ ನಡೆದಿತ್ತು. ಕಳೆದ ಅ.1 ರಂದು ತಾಲೂಕಿನ ಕಣ್ಣಿಗೇರಿ ಸಮೀಪದ ಸಾರಬೈಲ್ ನ ಮಿಲಾಗ್ರಿ ವಾಜ್ ಅವರ ಮನೆಯಲ್ಲಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿತ್ತು.
ಈ ಎರಡೂ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು ಕಳ್ಳತನ ಮಾಡಿದ್ದ ಆರೋಪಿಯನ್ನು ರವಿವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜೋಯ್ಡಾ ತಾಲೂಕಿನ ಅಣಶಿ ಗ್ರಾಮದ ಕೂಣೆಮಣ ನುಜ್ಜಿ ನಿವಾಸಿ ಕೂಲಿ ಕೆಲಸದ ಸಮೀರ್ @ ಆರ್ಯ ತಂದೆ ಸೂರಜ್ ಪಾಟೀಲ್ @ ದೇಸಾಯಿ ಎಂದು ಗುರುತಿಸಲಾಗಿದೆ.
ಸಮೀರ್ @ ಆರ್ಯ ತಂದೆ ಸೂರಜ್ ಪಾಟೀಲ್ @ ದೇಸಾಯಿ
ಕಳ್ಳತನ ಮಾಡಿದ ಬಗ್ಗೆ ಆರೋಪಿಯು ಒಪ್ಪಿಕೊಂಡಿದ್ದಾನೆ. ಈತನು ಅಂತರ್ ಜಿಲ್ಲಾ ಕಳ್ಳನಾಗಿದ್ದು, ಉತ್ತರಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.