ಶಿರಸಿ ನಗರದ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ವೈದ್ಯಕೀಯ ಉಪಕರಣ ಖರೀದಿಗೆ ಟೆಂಡರ್ ಕರೆಯಲು ಆರೋಗ್ಯ ಇಲಾಖೆಗೆ ಸೂಚಿಸುತ್ತೇವೆ ಹಾಗು ತಜ್ಞ ವೈದ್ಯರ ನೇಮಕಾತಿಗೆ ಕೂಡಲೇ ಆದೇಶಿಸಲು ಸೂಕ್ತ ಸಚಿವಾಲಯಕ್ಕೆ ಮಾಹಿತಿ ನೀಡುವುದಾಗಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಅವರು ಮಂಗಳವಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ಚಳಿಗಾಲದ ಅಧಿವೇಶನದ ವೇಳೆ ನಡೆದ ಪ್ರತಿಭಟನಾ ನಿರತ ಸ್ಥಳಕ್ಕೆ ಬಂದು, ಹೋರಾಟಗಾರರ ಆಗ್ರಹವನ್ನು ಕೇಳಿ ಭರವಸೆ ನೀಡಿದರು.

ಬಿಜೆಪಿ ಮುಖಂಡ, ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಯು ಕಳೆದ 5 ವರ್ಷಗಳಿಂದ ಕುಂಟುತ್ತಾ ಸಾಗಿದೆ. ತಜ್ಞ ವೈದ್ಯರ ನೇಮಕಾತಿ, ವೈದ್ಯಕೀಯ ಯಂತ್ರೋಪಕರಣ ಟೆಂಡರ್ ನಡೆಯದೆ ಇರುವ ಕಾರಣಕ್ಕಾಗಿ ಹೋರಾಟವನ್ನು ನಡೆಸುತ್ತಿದ್ದೇವೆ. ಶೇಕಡಾ 80 ರಷ್ಟು ಕಾಮಗಾರಿ ಮುಗಿದ ನಂತರ ಟೆಂಡರ್ ಕರೆಯುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಇದುವರೆಗೂ ಟೆಂಡರ್ ಕರೆಯಲಿಲ್ಲ, ವೈದ್ಯರ ನೇಮಕಾತಿಯನ್ನೂ ಮಾಡಿಲ್ಲ. ಇದನ್ನು ಖಂಡಿಸಿ ಸರ್ಕಾರಕ್ಕೆ ಆಗ್ರಹಿಸಿವುದರ ಜತೆಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಶೀಘ್ರವಾಗಿ ಮೇಲ್ದರ್ಜೆಗೇರಿರುವ 250 ಹಾಸಿಗೆಯ ಆಸ್ಪತೆಗೆ ತಜ್ಞ ವೈದ್ಯರ ನೇಮಕಾತಿಯಾಗಬೇಕೆಂದು ಅವರು ಆಗ್ರಹಿಸಿದರು.

ಮಾಜಿ ಜಿಪಂ ಸದಸ್ಯೆ ಉಷಾ ಹೆಗಡೆ, ಪಂಚಾಯತ ಸದಸ್ಯ ನಾರಾಯಣ ಹೆಗಡೆ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಚಿದಾನಂದ ಹರಿಜನ ಮುಂಡಗೋಡು, ಮಂಜುನಾಥ ಕುಪ್ಪಗಡ್ಡೆ, ಅಂಕಿತ್ ಶಿರಸಿ, ಭೀಮಶಿ ವಾಲ್ಮೀಕಿ, ಬಸವರಾಜ ಹಸ್ಲರ್, ಶಂಕರಪ್ಪ, ರೈತ ಸಂಘದ ನೂರ್ ಅಹಮದ್ ಮುಂತಾದವರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading