ಯಲ್ಲಾಪುರ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ಡಿ.17 ಬುಧವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಯಲ್ಲಾಪುರ ಪಟ್ಟಣ, ಇಡಗುಂದಿ, ವಜ್ರಳ್ಳಿ, ಬಿಸಗೋಡ, ಆನಗೋಡ, ದೇಹಳ್ಳಿ, ಮಾಗೋಡ, ಉಪ್ಪಳೇಶ್ವರ, ಕಣ್ಣಿಗೇರಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಊರಿಗೆ ಬಂದ ಕಾಳಿಂಗ ಸರ್ಪ ರಕ್ಷಣೆ
ಯಲ್ಲಾಪುರ ತಾಲೂಕಿನ ಉಮ್ಚಚ್ಗಿ ಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಕಾಣಿಸಿಕೊಂಡ ಹತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಕಾಳಿಂಗ ಸರ್ಪವನ್ನು ಉರಗ ರಕ್ಷಕ ಮಂಜು ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಕಾಡಿಗೆ ಬಿಡಲಾಯಿತು.
ಕೃಷಿ ಭಾಗ್ಯ ಯೋಜನೆಯ ಪ್ರಯೋಜನ ಪಡೆಯಲು ಮನವಿ
2025-26 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಯಲ್ಲಾಪುರ ತಾಲೂಕಿನಲ್ಲಿ ಸಾಮಾನ್ಯ ರೈತರಿಗೆ 15 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರಿಗೆ 4 ಕೃಷಿಹೊಂಡಗಳ ನಿರ್ಮಾಣಕ್ಕೆ ಹಂಚಿಕೆ ಮಾಡಲಾಗಿದ್ದು, ಆಸಕ್ತ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಕೋರಲಾಗಿದೆ.
ಈ ಯೋಜನೆಯಡಿ ಪ್ರಯೋಜನ ಪಡೆಯುವ ರೈತರು 1 ಎಕರೆ ಕ್ಷೇತ್ರವನ್ನು ಹೊಂದಿರಬೇಕು. ನಿಗದಿತ ಅಳತೆಯ ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದಾಗಿದ್ದು, ಇದರ ಜೊತೆಯಲ್ಲಿ ಡಿಸೆಲ್ ಪಂಪ್‍ಸೆಟ್, ಸ್ಪಿಂಕ್ಲರ್ ಪೈಪ್ ಘಟಕ, ಹೊಲದ ಅಂಚಿನಲ್ಲಿ 100 ಮೀಟರ್ ಅಳತೆಯ ಕ್ಷೇತ್ರ ಬದು ನಿರ್ಮಾಣ ಹಾಗೂ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ ಹಾಗೂ ಅವಶ್ಯವಿದ್ದಲ್ಲಿ ಕೃಷಿಹೊಂಡದ ಒಳಗೆ ಟಾರ್ಪಲಿನ್ ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಯೋಜನೆಯ ಅನುಷ್ಟಾನಕ್ಕೆ ಸರ್ಕಾರವು ಸಾಮಾನ್ಯ ರೈತರಿಗೆ ಶೇ. 80 ಹಾಗೂ ಪರಿಶಿಷ್ಟ ಜಾತಿ/ಪಂಗಡ ರೈತರಿಗೆ ಶೇ. 90 ರಷ್ಟು ಸಹಾಯಧನವನ್ನು ನೀಡುತ್ತಿದ್ದು, ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಮಂಚಿಕೇರಿ, ಯಲ್ಲಾಪುರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಎಚ್.ಡಿ.ಪಿ.ಇ. ಸ್ಪಿಂಕ್ಲರ್ ಘಟಕಗಳನ್ನು ಶೇ. 90 ರ ಸಹಾಯಧನದಲ್ಲಿ (ರೈತರ ವಂತಿಕೆ ರೂ. 2666/-) ನೀಡಲಾಗುತ್ತಿದ್ದು, ಭತ್ತದ ಬೆಳೆ ಕ್ಷೇತ್ರ ಹೊಂದಿರುವ ಹಾಗೂ ಕಳೆದ 7 ವರ್ಷಗಳ ಅವಧಿಯಲ್ಲಿ ಈ ಯೋಜನೆಯಲ್ಲಿ ಸೌಲಭ್ಯ ಪಡೆಯದ ರೈತರು ರೈತ ಸಂಪರ್ಕ ಕೇಂದ್ರ ಮಂಚಿಕೇರಿ ಹಾಗೂ ಯಲ್ಲಾಪುರ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.