ಹಿರಿಯ ವಿದ್ವಾಂಸರು, ಪುರೋಹಿತರಾಗಿದ್ದ ಯಲ್ಲಾಪುರ ತಾಲೂಕಿನ ನೇರಲಮನೆಯ ದಿ.ಮಹಾಬಲೇಶ್ವರ ಭಟ್ಟ ಹಾಗೂ ನಾಟಕ, ತಾಳಮದ್ದಳೆ ಕಲಾವಿದರಾಗಿದ್ದ ದಿ.ಚಿದಂಬರ ಭಟ್ಟ ಸೂಳಗಾರ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಪೂರ್ವಭಾವಿ ಸಭೆಯು ಸೂಳಗಾರಿನಲ್ಲಿ ರವಿವಾರ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಿರಿಕಲಾ ಬಳಗದ ಮುಖ್ಯಸ್ಥ ರವೀಂದ್ರ ಭಟ್ಟ ವೈದಿಕರಮನೆ ಮಾತನಾಡಿ, ಈ ಇಬ್ಬರೂ ಮಹನೀಯರ ಅಭಿಮಾನಿಗಳು, ಒಡನಾಡಿಗಳೆಲ್ಲರ ಸಹಕಾರದೊಂದಿಗೆ ಸಂಸ್ಮರಣಾ ಕಾರ್ಯಕ್ರಮ ಆಯೋಜನೆ ಮಾಡುವ ಬಗ್ಗೆ ಚಿಂತಿಸಲಾಗಿದೆ. ಎಲ್ಲರ ಸಹಕಾರ ಅಗತ್ಯ ಎಂದರು.
ಸುಜ್ಞಾನ ಸೇವಾ ಸಂಸ್ಥೆಯ ಅಧ್ಯಕ್ಷ, ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಸರಳ,ಸಜ್ಜನರಾದ ದಿ.ಮಹಾಬಲೇಶ್ವರ ಭಟ್ಟ ನೇರಲಮನೆಯವರು ಹಿರಿಯ ವಿದ್ವಾಂಸರಾಗಿ, ಪುರೋಹಿತರಾಗಿ, ಉತ್ತಮ ನಾಟಕ ಕಲಾವಿದರಾಗಿ ಹಾಗೂ ಕಲಾ ಪೋಷಕರಾಗಿ ಗುರುತಿಸಿಕೊಂಡವರು. ಶಿಷ್ಯರನ್ನು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ದಿ.ಚಿದಂಬರ ಭಟ್ಟ ಅವರು ಉತ್ತಮ ನಾಟಕ ಕಲಾವಿದರಾಗಿ, ತಾಳಮದ್ದಲೆ ಅರ್ಥಧಾರಿಯಾಗಿ ಪರಿಚಿತರಾಗಿದ್ದರು. ಕಲಾ ಉಪಾಸಕರೂ ಹೌದು, ಈ ಇಬ್ಬರು ಮಹನೀಯರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಮಿತ್ತ ತಾಳಮದ್ದಲೆ, ಸಂಗೀತ ಕಾರ್ಯಕ್ರಮ, ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೌರಾಣಿಕ ನಾಟಕ ಪ್ರದರ್ಶನದೊಂದಿಗೆ ಈ ಇಬ್ಬರ ಸಂಸ್ಮರಣೆ ಮಾಡುವ ಕುರಿತು ಯೋಚಿಸಲಾಗಿದೆ ಎಂದರು.
ಮುಂಬರುವ ಮಾರ್ಚ್ ತಿಂಗಳಲ್ಲಿ ಸಂಸ್ಮರಣಾ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಹಾಗೂ ಈ ಬಗ್ಗೆ ಸಿದ್ಧತೆ ಕೈಗೊಳ್ಳಲು ಸದ್ಯದಲ್ಲಿಯೇ ಸಾರ್ವಜನಿಕರ ಸಭೆ ಕರೆದು ಕಾರ್ಯಕ್ರಮದ ರೂಪುರೇಷೆ ಚರ್ಚಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.