ಕಿರಾಣಿ ಅಂಗಡಿಯ ಹಿಂಬದಿಯ ಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಕಿರಾಣಿ ಸಾಮಾನುಗಳು ಹಾಗೂ ನಗದು ಹಣವನ್ನು ಕದ್ದೊಯ್ದ ಘಟನೆ ಕನಕನಹಳ್ಳಿಯಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಕನಕನಹಳ್ಳಿಯಲ್ಲಿರುವ ನರಸಿಂಹ ಭಾಗ್ವತ್ ಅವರ ಅನ್ನಪೂರ್ಣ ಮಾರ್ಟ್ ಕಿರಾಣಿ ಅಂಗಡಿಯ ಹಿಂದಿನ ಬಾಗಿಲಿಗೆ ರಂಧ್ರ ಮಾಡಿ, ಬಾಗಿಲಿನ ಚಿಲಕ ತೆಗೆದು ಅಂಗಡಿಯ ಒಳಗೆ ಪ್ರವೇಶಿಸಿದ ಕಳ್ಳರು ಅಂಗಡಿಯ ಒಳಗೆ ಟೇಬಲ್ ಡ್ರಾವರ್ ನೊಳಗೆ ಇಟ್ಟಿದ್ದ ಹಣ ಹಾಗೂ ಅಂಗಡಿಯಲ್ಲಿದ್ದ ಕಿರಾಣಿ ಸಾಮಾನು ಹಾಗೂ ಐಸ್ ಕ್ರೀಂ ಮತ್ತು ಇನ್ನಿತರೇ ಸಾಮಾನುಗಳನ್ನು ಒಳಗೊಂಡು ಒಟ್ಟೂ 25,000 ರೂ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಕಳ್ಳರನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನರಸಿಂಹ ಭಾಗ್ವತ್ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು
ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಶಿರಸಿ ತಾಲೂಕಿನ ಬಾಳೆಗದ್ದೆಯ ನಿವಾಸಿ 45 ವರ್ಷದ ಕ್ಷೌರಿಕ ವೃತ್ತಿಯ ರವಿ ವೆಂಕಟ್ರಮಣ ಕೊಡಿಯಾ ಡಿ.15 ರಂದು ಅತೀ ವೇಗ ಮತ್ತು ಅಜಾಗರೂಕತೆಯಿಂದ ಶಿರಸಿ ಕಡೆಯಿಂದ ಹುಲೇಕಲ್ ರಸ್ತೆ ಮೂಲಕ ಬಾಳೆಗದ್ದೆ ಕಡೆಗೆ ಹೋಗುತ್ತಿರುವಾಗ, ನೀರನಳ್ಳಿ ಕ್ರಾಸ್ ಹತ್ತಿರ ಆಯತಪ್ಪಿ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಹಾಗೂ ಎಡಗೈಗೆ ಗಂಭೀರವಾದ ಗಾಯವಾಗಿತ್ತು.
ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರವಿ ಕೊಡಿಯಾ ಮೃತಪಟ್ಟಿದ್ದಾನೆ. ಈ ಕುರಿತು ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.