ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಪಡೆದುಕೊಂಡು ಹೋಗಿದ್ದ ವ್ಯಕ್ತಿಯೊಬ್ಬ ಕಳೆದ 22 ವರ್ಷಗಳಿಂದ ತಲೆಮರೆಸಿಕೊಂಡಿದ್ದನು, ಖಚಿತ ಮಾಹಿತಿಯ ಮೇರೆಗೆ ಈ ಆರೋಪಿಯನ್ನು ಶಿರಸಿ ಹೊಸ ಮಾರುಕಟ್ಟೆಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿ ಎಕ್ಕಂಬಿಯ ನೀಲಪ್ಪ ಮಲ್ಲಪ್ಪ ಅಗಸೇಬಾಗಿಲು ಎಂಬಾತನ ವಿರುದ್ಧ 22 ವರ್ಷಗಳ ಹಿಂದೆ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಜಾಮೀನು ಪಡೆದ ನಂತರ ನಾಪತ್ತೆಯಾಗಿದ್ದ ಈತನ ವಿರುದ್ಧ ವಾರೆಂಟ್ ಜಾರಿಯಾಗಿತ್ತು, ಬೆಂಗಳೂರಿನಲ್ಲಿ ಆರೋಪಿ ಇರುವುದನ್ನು ಪತ್ತೆಹಚ್ಚಿದ ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಿಷೇಧಿತ ಇ-ಸಿಗರೇಟ್ ಜಪ್ತಿ: ಪ್ರಕರಣ ದಾಖಲು
ತನ್ನ ಅಂಗಡಿಯಲ್ಲಿ ನಿಷೇಧಿತ ಇ-ಸಿಗರೇಟ್ ಸಂಗ್ರಹಿಸಿ ಇಟ್ಟಿದ್ದ ವ್ಯಕ್ತಿಯ ವಿರುದ್ಧ ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಸಿದ್ದಿಕ್ ಅಬ್ದುಲ್ ರೆಹಮಾನ್ ಭಟ್ಕಳ ನಗರದ ಹೂವಿನ ಚೌಕ್ ದುಬೈ ಮಾರ್ಕೆಟ್ ನಲ್ಲಿರುವ ತನ್ನ ಅಂಗಡಿಯಲ್ಲಿ 76 ಸಾವಿರ ರೂ ಮೌಲ್ಯದ ನಿಷೇಧಿತ ಇ-ಸಿಗರೇಟ್ ಮತ್ತು 62,500 ರೂ ಮೌಲ್ಯದ ಇ-ಸಿಗರೇಟಿಗೆ ತುಂಬುವ ನಿಕೋಟಿನ್ ಲಿಕ್ವಿಡ್ ರಿಫಿಲ್ ಗಳನ್ನು ದಾಸ್ತಾನು ಇಟ್ಟಿರುವುದು ಪೊಲಿಸ್ ದಾಳಿಯ ಸಂದರ್ಭದಲ್ಲಿ ಕಂಡುಬಂದಿದೆ. ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.