ಯಲ್ಲಾಪುರದ ಕಾಳಮ್ಮನಗರದಲ್ಲಿ ಶನಿವಾರ ನಡೆದ ರಂಜಿತಾ ಮಲ್ಲಪ್ಪ ಬನ್ಸೋಡೆ ಹತ್ಯೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿಂದ ರವಿವಾರ ಯಲ್ಲಾಪುರ ಬಂದ್ ಹಾಗೂ ಪ್ರತಿಭಟನೆ ನಡೆಯಿತು. ಯಲ್ಲಾಪುರ ಬಂದ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂರಾರು ಜನರು ಜಮಾಯಿಸಿ ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾದ ಯಲ್ಲಾಪುರ ಪಟ್ಟಣದಲ್ಲಿ ಇಂತಹ ಹೀನ ಕೃತ್ಯ ನಡೆದಿರುವುದು ಖಂಡನೀಯವಾಗಿದೆ. ರಾಜ್ಯದ ವಿವಿದೆಡೆ ಇಂತಹ ಘಟನೆಗಳು ನಡೆಯಲು ರಾಜ್ಯ ಸರ್ಕಾರದ ನಿಷ್ಕ್ರಿಯತೆ ಕಾರಣವಾಗಿದೆ. ಇದೊಂದು ಜಿಹಾದ್ ಪ್ರಕರಣವಾಗಿದ್ದು, ಈ ಹತ್ಯೆಯ ಆರೋಪಿ ರಫೀಕ್ ಗೆ ಸಹಕರಿಸಿದವರನ್ನೂ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಶಾಂತಿ ಮತ್ತು ಸಮೃದ್ಧಿಗೆ ಹೆಸರಾದ ಯಲ್ಲಾಪುರದಲ್ಲಿ ಮುಸ್ಲಿಂ ಯುವಕನಿಂದ ಹಿಂದೂ ದಲಿತ ಕುಟುಂಬದ ಮಹಿಳೆಯ ಹತ್ಯೆ ನಡೆದಿರುವುದು ರಾಜ್ಯದ ಜನರು ಬೆಚ್ಚಿಬೀಳುವಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅನೇಕ ಅಹಿತಕರ ಘಟನೆಗಳು ನಡೆಯುತ್ತಿವೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಅಡಳಿತ ವೈಫಲ್ಯವೇ ಕಾರಣ, ಇಂತ ಘಟನೆಗೆ ಯಾರ ಕುಮ್ಮಕ್ಕು ಇದೆ ಎಂದು ಜನರಿಗೆ ಗೊತ್ತಾಗಬೇಕು, ರಾಜ್ಯದಲ್ಲಿ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರದಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸಬೇಕು ಎಂದರು.

ಮೃತ ರಂಜಿತಾ ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿದೆ, ಪಾಲಕರು ಇಲ್ಲದೇ ಅನಾಥವಾಗಿರುವ ರಂಜಿತಾ ಅವರ ಹತ್ತು ವರ್ಷದ ಬಾಲಕನಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವತಿಯಿಂದ ಊಟ,ವಸತಿ ಸಹಿತ ಸಂಪೂರ್ಣ ಉಚಿತ ಶಿಕ್ಷಣವನ್ನು ಕೊಡುತ್ತೇವೆ ಎಂದು ಹರಿಪ್ರಕಾಶ ಕೋಣೆಮನೆ ಘೋಷಿಸಿದರು.

ಮೃತ ರಂಜಿತಾ ಕುಟುಂಬಕ್ಕೆ ರಾಜ್ಯ ಸರ್ಕಾರವು ಕನಿಷ್ಠ 50 ಲಕ್ಷ ರೂ ಪರಿಹಾರವನ್ನು ತಕ್ಷಣ ನೀಡಬೇಕು, ಕುಟುಂದ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಸಹಾಯಕ ಆಯುಕ್ತೆ ಕಾವ್ಯಾರಾಣಿ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮಾತನಾಡಿ, ಸಮಾಜಘಾತುಕ ಶಕ್ತಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಇಂತಹ ಘಟನೆಗಳು ಮರುಕಳಿಸಬಾರದು, ರಂಜಿತಾ ಹತ್ಯೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಎಸ್ಪಿ ದೀಪನ್ ಮಾತನಾಡಿ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದರು.

ಪ್ರಮುಖರಾದ ಪ್ರಮೋದ ಹೆಗಡೆ, ರಾಮು ನಾಯ್ಕ, ವೆಂಕಟ್ರಮಣ ಬೆಳ್ಳಿ, ಉಮೇಶ ಭಾಗ್ವತ್, ನಾಗೇಶ ಪತ್ತಾರ್, ಪ್ರಸಾದ ಹೆಗಡೆ, ಎನ್.ಎಸ್.ಭಟ್ಟ, ಲೋಕೇಶ ಪಾಠಣಕರ್, ಚಿದಾನಂದ ಹರಿಜನ, ಗೋಪಾಲಕೃಷ್ಣ ಭಟ್ಟ, ಗಜಾನನ ನಾಯ್ಕ ಮುಂತಾದವರು ಮಾತನಾಡಿದರು.

ಹಿಂದೂ ಪರ ಸಂಘಟನೆಗಳು ಕರೆದ ಯಲ್ಲಾಪುರ ಬಂದ್ ಗೆ ರವಿವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರವಿವಾರ ನಡೆಯಬೇಕಿದ್ದ ವಾರದ ಸಂತೆಯು ರದ್ದುಗೊಂಡಿತ್ತು. ವಾಹನಗಳ ಸಂಚಾರ, ಜನರ ಓಡಾಟ ಎಂದಿನಂತೆ ಇತ್ತು.

ರಫೀಕ್ ನಿಂದ ಹತ್ಯೆಯಾದ ರಂಜಿತಾ ಅವರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

ಪಟ್ಟಣದ ಕಾಳಮ್ಮನಗರದಲ್ಲಿರುವ ಮೃತ ರಂಜಿತಾ ಮನೆಯಲ್ಲಿ ಕುಟುಂಬದವರು ಹಾಗೂ ಸಂಬಂಧಿಕರು ತೀವ್ರ ದುಃಖದಲ್ಲಿ ಇದ್ದಾರೆ. ರಂಜಿತ ಮನೆಯ ಮುಂದೆ ಹಾಗೂ ಹಂತಕ ರಫೀಕ್ ಮನೆಯ ಎದುರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಬೀಡುಬಿಟ್ಟಿದ್ದಾರೆ.

ಮೃತ ರಂಜಿತಾ ಮನೆಗೆ ರವಿವಾರ ಮಧ್ಯಾಹ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading