ತೋಟದಲ್ಲಿ ಕುಳಿತುಕೊಂಡಿದ್ದ ಮಹಾಬಲೇಶ್ವರ ಭಟ್ಟ ಅವರಿಗೆ, ಇವರ ತಮ್ಮ ಕೃಷ್ಣ ಭಟ್ಟ ಕತ್ತಿಯಿಂದ ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ.
ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದ 62 ವರ್ಷದಮಹಾಬಲೇಶ್ವರ ವಿಶ್ವೇಶ್ವರ ಭಟ್ಟ ಅವರು ಅಂಕೋಲಾ ತಾಲೂಕಿನ ಹೆಗ್ಗಾರ ಗ್ರಾಮದಲ್ಲಿನ ಸರ್ವೆ ನಂ.42, ಹಿಸ್ಸಾ 70ರಲ್ಲಿರುವ ತಮ್ಮ ಜಮೀನಿನಲ್ಲಿ ಬೇಸಾಯ ಮಾಡದಂತೆ ಇದೇ ಗ್ರಾಮದಲ್ಲಿರುವ ಮಹಾಬಲೇಶ್ವರ ಭಟ್ಟ ಅವರ ತಮ್ಮ 52ವರ್ಷದ ಕೃಷ್ಣ ಭಟ್ಟ ಅವರು ತೊಂದರೆಕೊಡುತ್ತಾ ಜೀವ ಬೆದರಿಕೆ ಹಾಕುತ್ತಿದ್ದರು.
ಜ.3ರಂದು ಬೆಳಿಗ್ಗೆ ಮಹಾಬಲೇಶ್ವರ ಭಟ್ಟ ಅವರು ತಮ್ಮ ತೋಟಕ್ಕೆ ಹೋದಾಗ ಕೃಷ್ಣ ಭಟ್ಟ ಅವರು ಬಂದು ನೀನು ಇಲ್ಯಾಕೆ ಬಂದೆ? ಇಲ್ಲಿ ನಿನಗೇನು ಕೆಲಸ? ಇದು ನನ್ನ ಜಮೀನು. ಇಲ್ಲಿಂದ ಹೋಗದೇ ಇದ್ದರೆ ಕೊಂದುಹಾಕುತ್ತೇನೆ ಎಂದು ಬೈದಿದ್ದಾರೆ. ಇದು ನನ್ನ ಜಮೀನು, ನನಗೆ ಇಲ್ಲಿಗೆ ಬರಲು ಹಕ್ಕಿದೆ ಎಂದು ಮಹಾಬಲೇಶ್ವರ ಭಟ್ಟ ಹೇಳಿದಾಗ ಸಿಟ್ಟುಗೊಂಡ ಕೃಷ್ಣ ಭಟ್ಟ ಅವರು, ಕೊಂದೇ ಬಿಡುತ್ತೇನೆ ಎಂದು ತನ್ನ ಕೈಲ್ಲಿದ್ದ ಕತ್ತಿಯನ್ನು ಮಹಾಬಲೇಶ್ವರ ಭಟ್ಟ ಅವರ ಕಡೆಗೆ ಬೀಸಿದ್ದಾರೆ.
ತನ್ನ ಬಲಕೈಯನ್ನು ಅಡ್ಡ ಹಿಡಿದು ಕುತ್ತಿಗೆಯನ್ನು ಕತ್ತಿಹ ಹೊಡೆತದಿಂದ ತಪ್ಪಿಸಿಕೊಂಡ ಪರಿಣಾಮ ಮಹಾಬಲೇಶ್ವರ ಭಟ್ಟ ಅವರ ಬಲಕೈಗೆ ಕತ್ತಿ ಏಟು ಬಿದ್ದು ರಕ್ತ ಬಂದಿದೆ. ನಂತರ ಮಹಾಬಲೇಶ್ವರ ಭಟ್ಟ ಅವರ ಮೇಲೆ ಕಾಲಿನಿಂದ ತುಳಿದು ಹಲ್ಲೆಮಾಡಿದ ಕೃಷ್ಣ ಭಟ್ಟ ಅವರು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಇಲ್ಲಿಗೆ ಇನ್ನೊಮ್ಮೆ ಬಂದರೆ ಇದೇ ಕತ್ತಿಯಿಂದ ಕೊಚ್ಚಿಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಹಾಬಲೇಶ್ವರ ಭಟ್ಟ ಅವರು ಕೃಷ್ಣ ಭಟ್ಟ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.