




8-1-2026 ಗುರುವಾರ ಯಲ್ಲಾಪುರ

ಅತಿಕ್ರಮಣದಾರರ ಸಂಕಷ್ಟದ ಕುರಿತು ಅರಣ್ಯ ಸಚಿವರಿಗೆ ಅನಂತಮೂರ್ತಿ ಹೆಗಡೆ ಮನವಿ
ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದರರು ಎದುರಿಸುತ್ತಿರುವ ಸಂಕಷ್ಟದ ಕುರಿತು ಹಾಗೂ ಅರಣ್ಯ ಇಲಾಖೆಯಿಂದ ರೈತರಿಗೆ ಆಗುತ್ತಿರುವ ತೊಂದರೆಯ ಕುರಿತು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆಯವರ ನೇತ್ರತ್ವದಲ್ಲಿ ಮುಖಂಡರು ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಗುರುವಾರ ಮನವಿ ಸಲ್ಲಿಸಿದರು.

ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಂಕಷ್ಟವನ್ನು ಸಚಿವರ ಗಮನಕ್ಕೆ ತರಲಾಯಿತು. ರೈತರಿಗೆ ಸಂಬಂಧಿಸಿದ ಬೆಟ್ಟವನ್ನು ಬಿ ಖರಾಬ್ ಎಂದು ಆರ್ ಟಿ ಸಿ ಯಲ್ಲಿ ನಮೂದಿಸುವ ಪ್ರಸ್ತಾವನೆಯನ್ನು ತೆಗೆದುಹಾಕುವುದು ಬಗ್ಗೆ ಚರ್ಚಿಸಲಾಯಿತು ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಶೀಘ್ರವಾಗಿ ಆಗಮಿಸುವಂತೆ ಸಚಿವರಲ್ಲಿ ಕೇಳಿಕೊಳ್ಳಲಾಯಿತು ಮತ್ತು ಅರಣ್ಯ ಅಧಿಕಾರಿಗಳು ಅಮಾನುಷವಾಗಿ ಅಡಿಕೆ ಮರಗಳನ್ನ ಕಡಿಯುತ್ತಿರುವುದರ ಬಗ್ಗೆ ಗಮನ ಸೆಳೆಯಲಾಯಿತು.
ಮನವಿಗೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜನರಿಗೆ ತೊಂದರೆ ಕೊಡದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಬನವಾಸಿ ರೈತನ ನಾಯಕರಾದ ರಮೇಶ ನಾಯಕ್ ಕುಪ್ಪಳ್ಳಿ ರಾಘವೇಂದ್ರ ನಾಯಕ್ ಬಿಸಿಲು ಕೊಪ್ಪ ಸೋಮಶೇಖರ್ ನಾಯಕ್ ಬಾಸಿ, ಜಗದೀಶ ಹೆಗಡೆ ಬ್ಯಾಗದ್ದೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಸಚಿವರಿಗೆ ನೀಡಿದ ಮನವಿಯಲ್ಲಿ ಏನಿದೆ?
ಮಾನ್ಯರೇ,
ಈ ಮೂಲಕ ತಮ್ಮ ಗಮನಕ್ಕೆ ತರುವುದು ಏನೆಂದರೆ, ನಮ್ಮ ಉತ್ತರ ಕನ್ನಡ ಜಿಲ್ಲೆ ಶೇ.80% ಅರಣ್ಯ ಪ್ರದೇಶದಿಂದ ಕೂಡಿದ್ದು, ಸಾಮಾನ್ಯವಾಗಿ ಇಲ್ಲಿನ ಜನ ಮನೆಯಿಂದ ಹೊರಗೆ ಕಾಲಿಟ್ಟರೆ ಅರಣ್ಯ ಪ್ರದೇಶವೇ ಆಗಿದೆ. ಹೀಗಿರುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತಿಚೆಗೆ ಬಡ ಸಾರ್ವಜನಿಕರು, ರೈತರ ಮೇಲೆ ಅರಣ್ಯ ಒತ್ತುವರಿ ವಿಚಾರದಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಳೆದ 50-60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಫಲ ಬರುತ್ತಿದ್ದ ರೈತರ ತೋಟಗಳನ್ನು ನಾಶಪಡಿಸಿ, ಸಾವಿರಾರು ಜನರಿಗೆ ನೋಟೀಸನ್ನು ಈಗಾಗಲೇ ನೀಡಿದ್ದಾರೆ. ಈ ಕಾರಣಕ್ಕೆ ಜಿಲ್ಲೆಯ ಬಹುಪಾಲು ಜನರೀಗ ಆತಂಕದಲ್ಲಿದ್ದಾರೆ. ಬೀದರ್, ಕಲಬುರ್ಗಿ, ವಿಜಯಪುರ ಸೇರಿದಂತೆ ರಾಜ್ಯದ ಇತರೆಡೆಯ ಅರಣ್ಯ ಒತ್ತುವರಿಗೂ ಉತ್ತರ ಕನ್ನಡ ಜಿಲ್ಲೆಗೂ ತೀರಾ ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ತಾವು ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಒಮ್ಮೆ ದಯವಿಟ್ಟು ಭೇಟಿ ನೀಡಿ, ವಾಸ್ತವ ಅಂಶವನ್ನು ಒಮ್ಮೆ ಮನಗಾಣಬೇಕು. ಇಲ್ಲಿನ ಜನರ ಸಂಕಷ್ಟದ ವಾಸ್ತವತೆಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು. ಪುಸ್ತಕದಲ್ಲಿನ ಕಾನೂನುಗಳು ಎಲ್ಲಡೆಯೂ ಒಂದೇ ರೀತಿ ಮಾಡುವುದು ಕಷ್ಟಸಾಧ್ಯ. ಜೊತೆಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಅತಿ ಹೆಚ್ಚು ಸೊಪ್ಪಿನ ಬೆಟ್ಟ ಭೂಮಿಯನ್ನು ಹೊಂದಿದ್ದು, ಈ ಸೊಪ್ಪಿನ ಬೆಟ್ಟ ಜಾಗಕ್ಕೆ ಬ್ರಿಟಿಷರ ಕಾಲದಿಂದನೂ ರೈತರು ತೆರಿಗೆಯನ್ನು ತುಂಬುತ್ತಿದ್ದಾರೆ. ರೈತರು ತೋಟದ ನಿರ್ವಣೆಗೆ ಸೊಪ್ಪಿನ ಬೆಟ್ಟದಿಂದ ಸೊಪ್ಪು, ಮಣ್ಣು, ದರಕು ಅತ್ಯಗತ್ಯ. ಇದೀಗ ತೋಟಕ್ಕೆ ಮಣ್ಣು ತೆಗೆಯಲು ಅವಕಾಶ ಸಿಗದೇ ತೋಟಗಳು ಒಣಗುತ್ತಿದೆ. ಈ ನಿಟ್ಟಿನಲ್ಲಿ ತೋಟದ ಅಭಿವೃದ್ದಿಕ್ಕೋಸ್ಕರ ಪೂರ್ಜರ ಕಾಲದಿಂದಲೂ ಬಿಟ್ಟುಕೊಟ್ಟಿರುವ ಸೊಪ್ಪಿನ ಬೆಟ್ಟ ಪ್ರದೇಶವನ್ನು ಸರಕಾರ ಇದೀಗ ‘ಬ ಖರಾಬ್’ ಎಂದು ಪರಿವರ್ತನೆ ಮಾಡುವ ವಿಚಾರವನ್ನು ಕೈಬಿಡಬೇಕು. ಸುಮಾರು 80% ಜನರು ಈ ಸೊಪ್ಪಿನ ಬೆಟ್ಟ ಭೂಮಿಯಲ್ಲಿಯೇ ವಾಸಕ್ಕೆ ಮನೆ ಕಟ್ಟಿಕೊಂಡಿದ್ದಾರೆ. ಹೀಗಾಗಿ ನಮ್ಮ ಸೊಪ್ಪಿನ ಬೆಟ್ಟ ಭೂಮಿಯನ್ನು ಈ ಮುಂಚಿನಂತೆಯೇ ಇರುವಂತೆ ತಾವು ಆದೇಶ ಮಾಡಬೇಕೆಂದು ಸವಿನಯ ಪ್ರಾರ್ಥನೆ. ಈ ಎಲ್ಲ ಹಿನ್ನಲೆಯಲ್ಲಿ ತಾವು ಈ ಕೂಡಲೇ ಒಂದು ಬಾರಿ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ, ರೈತರ ನೈಜ ಪರಿಸ್ಥಿತಿಯನ್ನು ಅವಗಾಹನೆಗೆ ತೆಗೆದುಕೊಳ್ಳಬೇಕು ಮತ್ತು ಈ ತುರ್ತಾಗಿ ಅರಣ್ಯ ಒತ್ತುವರಿ ವಿಚಾರವಾಗಿ ಉತ್ತರ ಕನ್ನಡದ ರೈತರ ಮೇಲೆ ಪ್ರಹಾರ ಮಾಡದಂತೆ ಸೂಚನೆ ನೀಡಲು ವಿನಂತಿಸಿದೆ.
ಧನ್ಯವಾದಗಳೊಂದಿಗೆ,
ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ
ಅನಂತಮೂರ್ತಿ ಹೆಗಡೆ
ಅಧ್ಯಕ್ಷರು,
ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್, ಶಿರಸಿ

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS





















