ದಿನ ಬೆಳಗಾದರೆ, ಕೊಲೆ ಸುಲಿಗೆ, ಅತ್ಯಾಚಾರ ಅನಾಚಾರಗಳಿಂದ ನಲುಗುತ್ತಿರುವ ಬಾಂಗ್ಲಾದೇಶದಲ್ಲಿ, ಅಲ್ಪಸಂಖ್ಯಾತ ಹಿಂದುಗಳ ಪರಿಸ್ಥಿತಿ ಅಕ್ಷರಶಃ ನರಕವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ, ಬಾಂಗ್ಲಾದೇಶದಲ್ಲಿ ಕನಿಷ್ಠ ಹತ್ತು ಹಿಂದುಗಳ ಹತ್ಯೆಯಾಗಿದೆ. ಬಾಂಗ್ಲಾದಲ್ಲಿ ಮತಾಂಧರ ಅಟ್ಟಹಾಸಕ್ಕೆ ಕಡಿವಾಣ ಅಗತ್ಯ ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಹೇಳಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಡಿಸೆಂಬರ್ 2 ಕ್ಕೆ ಮೊದಲ ಬಲಿಯಾಗಿತ್ತು. ಪ್ರಂತೋಷ ಕರ್ಮಕರ ಎಂಬ ಹಿಂದು ಯುವಕನನ್ನು ಬಾಂಗ್ಲಾ ಮುಸ್ಲಿಂ ಮತಾಂಧರು ಮನೆಯಿಂದ ಹೊರಗೆ ಎಳೆದು ಗುಂಡಿಟ್ಟು ಕೊಂದಿದ್ದರು. ಅದೇ ದಿನ ರಾತ್ರಿ ಬಾಂಗ್ಲಾದ ಫರಿದಾಬಾದ್ ಜಿಲ್ಲೆಯಲ್ಲಿ ಇನ್ನೋರ್ವ ಹಿಂದು ತರುಣ ಉತ್ಕಲ್ ಸರ್ಕಾರ ಎಂಬಾತನ ಕೊಲೆಯಾಗಿತ್ತು. ಡಿಸೆಂಬರ್ 7 ಕ್ಕೆ ಜೋಗೇಶ ಚಂದ್ರ ರಾಯ್ ಹಾಗೂ ಆತನ ಪತ್ನಿ ಸುವರ್ಣ ರಾಯ್ ಎಂಬುವರ ಹತ್ಯೆ ಮಾಡಲಾಯಿತು. ಡಿಸೆಂಬರ್ 12 ಕ್ಕೆ ಶಾಂತೋ ಚಂದ್ರ ದಾಸ್, 18 ಕ್ಕೆ ದೀಪು ಚಂದ್ರದಾಸ್, 24 ಕ್ಕೆ ಅಮ್ರತ್ ಮಂಡಲ್, 29 ಕ್ಕೆ ಬಜೇಂದ್ರ ಬಿಸ್ವಾಸ್, ಈ ವರ್ಷದ ಜನವರಿ 3 ಕ್ಕೆ ಖೋಕನ್ ಚಂದ್ರ, ಜನವರಿ 5 ಕ್ಕೆ ರಾಣಾ ಕಾಂತಿ ಭೈರಾಗಿ ಹೀಗೆ ಯಾದಿ ಮುಂದುವರೆಯುತ್ತದೆ.

ಇವರೆಲ್ಲ ಕಾನೂನಿನ ಕಣ್ಣಿಗೆ ಬಿದ್ದವರು. ಕಾನೂನಿನ ಕಣ್ಣು ತಪ್ಪಿ ಹತ್ಯೆಯಾದವರು ಇನ್ನೆಷ್ಟೋ ಹಿಂದುಗಳಿದ್ದಾರೆ. ಆದರೂ ಬಾಂಗ್ಲಾ ಮತಾಂಧರ ಅಟ್ಟಹಾಸ ಕಡಿಮೆಯಾಗಿಲ್ಲ. ಬಾಂಗ್ಲಾ ಸರಕಾರದ ಸಹಕಾರದಲ್ಲಿ, ಕೊಲೆ ಸುಲಿಗೆ, ದೇವಸ್ಥಾನಗಳ ಲೂಟಿ, ಹಿಂದು ಮಹಿಳೆಯರ ಅಪಹರಣ, ಮಾನಭಂಗ ಇತ್ಯಾದಿಗಳು ರಾಜಾರೋಷವಾಗಿ ನಡೆಯುತ್ತಿವೆ. ಪ್ರತಿಭಟಿಸಿದವರ ಮನೆಗಳಿಗೆ ಬೆಂಕಿ ಬೀಳುತ್ತಿವೆ. ಕಳೆದ 50 ವರ್ಷಗಳಲ್ಲಿ ಬಾಂಗ್ಲಾ ಹಿಂದುಗಳ ಸಂಖ್ಯೆ, ಶೇಕಡಾ 30 ರಿಂದ 7 ಕ್ಕೆ ಇಳಿದಿದೆ. ಏನಾದರು ಇವರೆಲ್ಲ?. ಸಹಸ್ರಾರು ಹಿಂದುಗಳ ಕಗ್ಗೋಲೆಯಾಗಿದೆ, ಅನೇಕರು ನಾಪತ್ತೆಯಾಗಿದ್ದಾರೆ.

ಸಾವಿರಾರು ಕುಟುಂಬಗಳನ್ನು, ಹೆದರಿಸಿ ಬೆದರಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಇನ್ನೆಷ್ಟೋ ಕುಟುಂಬಗಳು, ಜೀವ ಉಳಿಸಿಕೊಳ್ಳಲು ಬಾಂಗ್ಲಾ ಬಿಟ್ಟು ಹೊರ ದೇಶಗಳಿಗೆ ಪಲಾಯನ ಮಾಡಿದ್ದಾರೆ. ನಮ್ಮಿಂದಲೇ ಹುಟ್ಟಿ, ನಮ್ಮಿಂದಲೇ ಬೆಳೆದು, ನಮ್ಮವರಿಂದಲೇ ಮನೆ ಕಟ್ಟಿಕೊಂಡು ಬದುಕುತ್ತಿರುವ ಬಾಂಗ್ಲಾ, ಇಂದು ಪಾಕಿಸ್ತಾನದ ಮಾತು ಕೇಳಿ, ನಮ್ಮವರ ಬೆನ್ನಿಗೇ ಚೂರಿ ಹಾಕುತ್ತಿದೆ. ಎಲ್ಲಿಯವರೆಗೆ ಸಹಿಸೋಣ, ಈ ಮಾರಣಹೋಮ?.

ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳು ಅಸಹಾಯಕರಾಗಿರಬಹುದು. ಆದರೆ, ಈ ದೇಶದಲ್ಲಿ ವಾಸಿಸುತ್ತಿರುವ ನಾವು ಬಹುಸಂಖ್ಯಾತ ಹಿಂದುಗಳೂ ಅಸಹಾಯಕರಾಗಿರುವುದೇಕೆ?. ಇಲ್ಲಿನ ಸರಕಾರಗಳೂ ಅಸಹಾಯಕವಾಗುತ್ತಿರುವುದೇಕೆ?. ನಮ್ಮ ಆಕ್ರೋಶ, ಸಿಟ್ಟು, ಸೆಡವು ಎಲ್ಲ ಕೇವಲ ಸಾಂಕೇತಿಕ ಪ್ರತಿಭಟನೆಗಳಿಗೆ, ಎಚ್ಚರಿಕೆಗಳಿಗೆ ಸೀಮಿತವಾಗುತ್ತಿವೆ. ಅದಕ್ಕಿಂತ ಮುಂದೆ ಹೋಗುತ್ತಿಲ್ಲ ಯಾಕೆ?. ಬೆಂಕಿ ಇನ್ನೂ ನಮ್ಮ ಬುಡಕ್ಕೆ ಬಂದಿಲ್ಲ ಎನ್ನುವ ಕಾರಣಕ್ಕಾಗಿಯೇ?. ಪ್ರಬುಧ್ದ ಹಿಂದುಗಳು ಇದರ ಬಗ್ಗೆ ಪಕ್ಷಾತೀತವಾಗಿ ಯೋಚಿಸಬೇಕು. ಕಾಲ ಮೀರುವ ಮೊದಲು ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ. ಎಂದು ರಾಮು ನಾಯ್ಕ ಹೇಳಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading