ಸತೀಶ ಹೆಗಡೆ ಹಾಗೂ ಗೋಪಾಲಕೃಷ್ಣ ಭಟ್ಟ ಅವರ ನಡುವೆ ಹೊಡೆದಾಟ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಸಮೀಪದ ಹಿರೇಸರದ ಕೃಷಿಕ ಸತೀಶ ನಾರಾಯಣ ಹೆಗಡೆ ಹಾಗೂ ತೋಟದಕಲ್ಲಳ್ಲಿಯ ಗೋಪಾಲಕೃಷ್ಣ ಉದಯ ಭಟ್ಟ ಅವರು ಸಂಬಂಧಿಕರಾಗಿದ್ದು, ಮೊದಲಿನಿಂದಲೂ ಇವರ ನಡುವೆ ಆಸ್ತಿ ವಿಚಾರವಾಗಿ ತಂಟೆ,ತಕರಾರು ನಡೆಯುತ್ತಿತ್ತು. ಈ ಇಬ್ಬರ ನಡುವೆ ಬುಧವಾರ ಬೆಳಿಗ್ಗೆ ಹೊಡೆದಾಟ ನಡೆದಿದೆ. ಈ ಇಬ್ಬರೂ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಿಸಿದ್ದಾರೆ.
ಸತೀಶ ನಾರಾಯಣ ಹೆಗಡೆ (52ವರ್ಷ) ನೀಡಿದ ದೂರಿನಲ್ಲಿ ಗೋಪಾಲಕೃಷ್ಣ ಭಟ್ಟ ಅವರು ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಜೋಳದ ಹಿಟ್ಟು ಮಾಡಿಸಲು ಉಮ್ಮಚಗಿಗೆ ಬಂದಾಗ, ಬೈಕ್ ಟೈರ್ ಗೆ ಗಾಳಿ ಹಾಕಿಸಲು ಅಲ್ಲಿನ ಮಹಾಗಣಪತಿ ಆಟೋ ವರ್ಕ್ ಗ್ಯಾರೇಜಿಗೆ ಹೋದಾಗ,
ಗ್ಯಾರೇಜಿನಲ್ಲಿ ಕೆಲಸ ನಿರ್ವಹಿಸುವ ಗೋಪಾಲಕೃಷ್ಣ ಭಟ್ಟ ಅವರು ತಮ್ಮ ಸುದ್ದಿಯನ್ನು ಬಹಳ ಕಡೆ ತಿರುಗುತ್ತಿದ್ದೀಯಾ ಎಂದು ಒಮ್ಮೆಲೇ ಗ್ಯಾರೇಜಿನಲ್ಲಿದ್ದ ಬೈಕಿನ ಸೇಫ್ಟಿ ಗಾರ್ಡ್ ತೆಗೆದು ತಲೆಗೆ, ಎಡಗಡೆ ಭುಜಕ್ಕೆ ಮತ್ತು ಬಲಕಾಲಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ ಸತೀಶ ಹೆಗಡೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿ ದೂರು
ಗೋಪಾಲಕೃಷ್ಣ ಉದಯ ಭಟ್ಟ (30 ವರ್ಷ) ಅವರು ಸತೀಶ ಹೆಗಡೆ ಹಿರೇಸರ ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸತೀಶ ಹೆಗಡೆ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಈ ದೂರಿನಲ್ಲಿರುವಂತೆ, ಬುಧವಾರ ಬೆಳಿಗ್ಗೆ ಗೋಪಾಲಕೃಷ್ಣ ಭಟ್ಟ ಅವರು ಉಮ್ಮಚಗಿಯ ಮಹಾಗಣಪತಿ ಗ್ಯಾರೇಜಿನಲ್ಲಿ ಕೆಲಸಮಾಡಿಕೊಂಡಿರುವಾಗ, ಸತೀಶ ಹೆಗಡೆ ಗ್ಯಾರೇಜಿಗೆ ಬಂದ ಸಂದರ್ಭದಲ್ಲಿ ತನಗೆ ಅವಾಚ್ಯವಾಗಿ ಬೈದು,
ಗ್ಯಾರೇಜಿನಲ್ಲಿರುವ ಬೈಕ್ ರಿಪೇರಿ ಮಾಡುವ ಕಬ್ಬಿಣದ ರಿಂಗ್ ಸ್ಪಾನರ್ ತೆಗೆದುಕೊಂಡು ತನ್ನ ಮುಖಕ್ಕೆ ಬೀಸಿದಾಗ, ತನ್ನ ಎಡಬದಿಯ ದವಡೆಗೆ ಮತ್ತುಮೂಗಿಗೆ ಗಾಯಪಡಿಸಿದ್ದು, ತನಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಗೋಪಾಲಕೃಷ್ಣ ಭಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಯಲ್ಲಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.