ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಗುಡಂದೂರು ಗೌಳಿವಾಡಾ ಶಾಲೆಯಲ್ಲಿ ಕಲಿಕಾ ಹಬ್ಬವು ಅತ್ಯಂತ ವಿಜ್ರಂಭಣೆಯಿಂದ ನಡೆಯಿತು. ಹಲವು ವೈಶಿಷ್ಟ್ಯಗಳೊಂದಿಗೆ ನಡೆದ ಈ ಕಲಿಕಾ ಹಬ್ಬದಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿತ್ತು.

ಕಿರವತ್ತಿ ಭಾಗದ 11 ಶಾಲೆಗಳ ಸಹಯೋಗದಲ್ಲಿ ನಡೆದ ಕಲಿಕಾ ಹಬ್ಬವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಹಿಂದುಳಿದ ಸಮುದಾಯದ ಮಕ್ಕಳೇ ಹೆಚ್ಚಾಗಿರುವ ಈ ಭಾಗದಲ್ಲಿ ಇಂತಹ ಕಲಿಕಾ ಹಬ್ಬದ ಮೂಲಕ ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಕಲಿಕಾ ಹಬ್ಬದ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ ಮಾತನಾಡಿ ಕಿರವತ್ತಿ ಭಾಗದ ಶಿಕ್ಷಕರ ನಿರಂತರ ಪ್ರಯತ್ನ ಮತ್ತು ಶ್ರಮದಿಂದ ಮಾತ್ರ ಇಂತಹ ಅದ್ಭುತವಾದ ಕಾರ್ಯಕ್ರಮ ನಡೆಯಲು ಸಾಧ್ಯವಾಗಿದೆ ಎಂದರು.

ಮಾಜಿ ಸೈನಿಕರಾದ ಗ್ರಾಮದ ಕಾಳು ಬೈರು ಪಾಟೀಲ್ ಹಾಗೂ ಇದೇ ಊರಿನ, ಇದೇ ಶಾಲೆಯಲ್ಲಿ ಕಲಿತ ಅಗ್ನಿ ವೀರ ಸೈನಿಕ ಬಬನ್ ಬೈರು ಪಾಟೀಲ್, ಹಾಗೂ ರಾಷ್ಟ್ರಮಟ್ಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ವಿಜೇತ ಶಿಕ್ಷಕ ಸಂತೋಷ್ ಗೋಪಾಲ್ ನಾಯಕ್ ಅವರನ್ನು ನ್ಮಾನಿಸಲಾಯಿತು. ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಗೌರವಿಸಲಾಯಿತು. ದೊಡ್ಲಾ ಡೈರಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಮತ್ತು ಪಾಲಕರಿಗೆ ಉಚಿತವಾಗಿ ಮೊಸರನ್ನು ವಿತರಿಸಿದರು. ಹ್ಯಾಂಗ್ಯೋ ಐಸ್ ಕ್ರೀಮ್ ನವರು ಎಲ್ಲರಿಗೂ ಉಚಿತವಾಗಿ ಐಸ್ ಕ್ರೀಮ್ ವಿತರಿಸಿದರು.

ಕಥೆ ಹೇಳುವುದು, ಧಾನ್ಯಗಳಿಂದ ರಂಗೋಲಿ, ಗಟ್ಟಿ ಓದು, ಛದ್ಮವೇಷ, ಪಾಲಕ ಮತ್ತು ಮಕ್ಕಳ ಮನೋರಂಜನಾತ್ಮಕ ಚಟುವಟಿಕೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವಿಶೇಷವಾದ ಗ್ರಾಮೀಣ ಸೊಗಡನ್ನು ನೆನಪಿಸುವ ಎತ್ತಿನಗಾಡಿಯ ಸೆಲ್ಫಿ ಕಾರ್ನರ್ ಎಲ್ಲರನ್ನೂ ಆಕರ್ಷಿಸಿತು.

ಕಾರ್ಯಕ್ರಮದ ಸಂಘಟಕರಾದ ಸಿ.ಆರ್.ಪಿ. ನಾಗರಾಜ್ ನಾಯ್ಕ ಅವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈಲಂದೂರು ಗೌಳಿವಾಡದ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನಡೆಯಿತು. ಹೊಸಳ್ಳಿ ಶಾಲೆಯ ಶಿಕ್ಷಕಿ ಗಾಯತ್ರಿ ಗದ್ದೆಮನೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ವಂದೇ ಮಾತರಂ ಗೀತೆಯ ಅಭಿಯಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶಿಕ್ಷಕಿ ರೂಪಾ ರಾಯ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು ಶಿಕ್ಷಕ ಉದಯ್ ಕುಮಾರ್ ವಂದಿಸಿದರು. ಗ್ರಾಮ ಪಂಚಾಯತ್ ಸದಸ್ಯ ಗಾಂಧಿ ಸೋಮಪುರಕರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಜಾನು ಪಾಟೀಲ್, ಪ್ರಮುಖರಾದ ನಾಮದೇವ ಧಾರವಾಡಕರ್, ಸತೀಶ್ ನಾಯಕ್, ನಾರಾಯಣ ಕಾಂಬಳೆ, ದಿಲೀಪ್ ದೊಡ್ಮನಿ, ಸಿಆರ್‍ ಪಿಗಳಾದ ಅರವಿಂದ ನಾಯ್ಕ, ಚಂದ್ರಹಾಸ್ ನಾಯ್ಕ, ವಿಶ್ವನಾಥ ಮರಾಠೆ, ಮೋಹನ ನಾಯ್ಕ, ಶಿವಾನಂದ ವೆರ್ಣೇಕರ್, ಅಮಿತಾ ನಾಯ್ಕ, ಕಲಾವತಿ ನಾಯಕ್, ಲಕ್ಷ್ಮಣ್ ಕಾಳು ಪಾಟೀಲ್, ರಾಮು ಧೂಳು ಗುಂಡ್ರೆ, ಹಾಗೂ ಗುಡಂದೂರು ಮತ್ತು ಸಾತಿಕಟ್ಟ ಮುಂತಾದವರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading