ಸಮಾಜ ಸೇವೆಗೆ ಸಿದ್ಧಗಂಗಾ ಶ್ರೀಗಳಿಂದ ಪ್ರೇರಣೆ: ಅನಂತಮೂರ್ತಿ ಹೆಗಡೆ
ಭಗವಂತ ನಮಗೆ ನೀಡಿರುವುದರಲ್ಲಿಯೇ ಒಂದು ಭಾಗವನ್ನು ಸಮಾಜಕ್ಕೆ ನೀಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತ ಮೂರ್ತಿ ಹೆಗಡೆ ಹೇಳಿದರು.
ಯಲ್ಲಾಪುರ ತಾಲೂಕಿನ ಮಲವಳ್ಳಿ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಿ ಅವರು ಮಾತನಾಡಿದರು. ಈವರೆಗೆ ನಾವು ಹಲವಾರು ಶಾಲೆಗಳಿಗೆ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಿದ್ದೇವೆ.
ಸಮಾಜ ಸೇವೆ ಮಾಡುವುದು ನಮ್ಮ ಪುಣ್ಯ. ಸಮಾಜ ಸೇವೆಗೆ ನಾವು ಸಿದ್ಧಗಂಗಾ ಮಠದ ಶ್ರೀಗಳ ಪ್ರೇರೇಪಣೆಯನ್ನು ಪಡೆದು ಮಾಡುತ್ತಿದ್ದೇವೆ. ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ್ ಸ್ವಾಮೀಜಿಯವರು ತ್ರಿವಿಧ ದಾಸೋಹ ಮಾಡುತ್ತ ಹಲವಾರು ಮಕ್ಕಳಿಗೆ ವಿದ್ಯೆ, ವಸತಿಯನ್ನು ಕಲ್ಪಿಸಿ ಕೊಟ್ಟಿದ್ದಾರೆ, ಅಲ್ಲಿ ಕಲಿತ ಮಕ್ಕಳು ಇಂದು ದೇಶ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಪ್ರೇರಣೆ ಯಾಗಿ ತೆಗೆದುಕೊಂಡು ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದೇವೆ.
ದಾನ ಮಾಡಿದಾಗ ಸಮಾಜದಲ್ಲಿ ಕೆಲವರು ದುಡ್ಡು ಹೆಚ್ಚಿದೆ ಹಾಗಾಗಿ ದಾನ ಮಾಡುತ್ತಾರೆ ಎನ್ನುತ್ತಾರೆ. ದಾನ ಮಾಡಿಲ್ಲ ಅಂದಾಗ ತುಂಬಾ ಜಿಪುಣ ಎನ್ನುತ್ತಾರೆ. ಆಗ ನಮಗೆ ಯಾವ ಕೆಲಸಕ್ಕೆ ದುಡ್ಡು ಕೊಡಬೇಕು ಎನ್ನುವ ಜಿಜ್ಞಾಸೆ ಶುರು ಆಗುತ್ತದೆ. ನಾನು ಇಲ್ಲಿ ಯಾವುದೋ ಕಾರ್ಯ ಸಾಧನೆಯ ಉದ್ದೇಶದಿಂದ ನಾನು ದಾನ ಮಾಡುತ್ತಿಲ್ಲ. ಸಮಾಜಕ್ಕೆ, ಅಗತ್ಯ ಇರುವವರಿಗೆ ಒಳ್ಳೆಯದಾಗಲಿ ಎಂದಷ್ಟೇ ದಾನ ಮಾಡುತ್ತೇನೆ. ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಅನಂತ ಮೂರ್ತಿ ಹೆಗಡೆಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ಭಟ್ಟ, ಪ್ರಮುಖರಾದ ಸುಬ್ಬಣ್ಣ ಬೋಳ್ಮನೆ, ರವಿ ಹುಳಸೆ, ರಾಘವೇ0ದ್ರ ಸ್ವಾಮಿಕೇರಿ, ಸವಿತಾ ಪೂಜಾರಿ, ಸಂತೋಷ್ ಕೊಳಗೇರಿ, ನರಸಿಂಹ ಭಟ್ಟ, ಆದರ್ಶ್ ಭಟ್ಟ, ಎನ್.ವಿ.ಭಟ್ಟ, ಜಾಹ್ನವಿ ಕುಣಬಿ ಮುಂತಾದವರು ಇದ್ದರು.