













12-2-2026 ಗುರುವಾರ ಯಲ್ಲಾಪುರ
ಒಂದು ವಾರದೊಳಗೆ ವಿಮಾ ಹಣ ಜಮಾ ಮಾಡಲು ಕೇಂದ್ರದಿಂದ ಸ್ಪಷ್ಟ ಆದೇಶ: ಸದಾನಂದ ಭಟ್ಟ
ರೈತರಿಗೆ ದೊರಕಬೇಕಾಗಿದ್ದ 2024 – 25 ನೇ ಸಾಲಿನ ಹವಾಮಾನ ಆಧಾರಿತ ವಿಮಾ ಪರಿಹಾರ ಹಣ ಮರೀಚಿಕೆಯಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಜನಪರ ಕಾಳಜಿಯಿಂದ ತಮ್ಮ ನಿರಂತರ ಪ್ರಯತ್ನದ ಮೂಲಕ ವಿಮಾ ಕಂಪನಿಯಿಂದ ಹಣ ಕೊಡಿಸಲು ಪ್ರಯತ್ನಿಸುತ್ತಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರಿಶ್ರಮದಿಂದ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ 11 ಜಿಲ್ಲೆಗಳ ಒಂದು ಲಕ್ಷ ರೈತರಿಗೆ 104 ಕೋಟಿ ರೂಪಾಯಿಗಳ ವಿಮಾ ಪರಿಹಾರವನ್ನು ಇನ್ನು ಒಂದು ವಾರದೊಳಗೆ ಜಮಾ ಮಾಡಲು ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ನಿರ್ದೇಶಕರಾದ ಚಂದ್ರಜಿತ್ ಚಟರ್ಜಿ ಅವರು ಕ್ಷೇಮ ಇನ್ಸೂರೆನ್ಸ್ ಕಂಪನಿಗೆ ಆದೇಶ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸದಾನಂದ ಭಟ್ ನಿಡಗೋಡ ಮಾಹಿತಿ ನೀಡಿದ್ದಾರೆ.

ಅವರು ಗುರುವಾರ ಪ್ರಕಟಣೆ ನೀಡಿ, ಕರ್ನಾಟಕ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಕೆ.ಎಸ್ಎ.ನ್ಎಂ.ಡಿ.ಸಿ ನಿರ್ವಹಿಸಬೇಕಾದ ಹವಾಮಾನ ವರದಿಯನ್ನು ನಿರ್ದಿಷ್ಟವಾಗಿ ನೀಡದೇ ಇರುವುದರಿಂದ ರೈತರಿಗೆ ವಿಮಾ ಪರಿಹಾರ ದೊರಕುವಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದನ್ನೇ ಪ್ರಮುಖ ಅಂಶವನ್ನಾಗಿಟ್ಟುಕೊಂಡು ಕ್ಷೇಮ ಇನ್ಸೂರೆನ್ಸ್ ಕಂಪನಿ ತನ್ನ ಉತ್ತರದಲ್ಲಿ ಕಾರಣವನ್ನಾಗಿ ನೀಡಿ ವಿಮಾ ಪರಿಹಾರ ನೀಡಲು ಅಸಹಾಯಕತೆಯನ್ನು ತೋರಿಸಿತ್ತು.
ಸಂಸದ ಕಾಗೇರಿಯವರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆರ್ ಡಬ್ಲ್ಯೂ ಬಿ ಸಿ ಐ ಎಸ್ ನಿಯಮಗಳಂತೆ ಸಂರಕ್ಷಣಾ ಪೋರ್ಟಲ್ ನಲ್ಲಿರುವ ಡಾಟಾವನ್ನು ಪುನಹ ಪರಿಶೀಲಿಸಿ ಸರಿಯಾಗಿದೆ ಎಂಬ ಮಾಹಿತಿಯನ್ನು ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆ ವತಿಯಿಂದ ಸಲ್ಲಿಕೆಯಾಗುವಂತೆ ಮಾಡಿದ್ದರು. ಇದನ್ನು ಪರಿಶೀಲಿಸಿದ ಕೇಂದ್ರ ಸರ್ಕಾರ ನಿಯಮಗಳಂತೆ ಸಂರಕ್ಷಣ ಪೋರ್ಟಲ್ ನಲ್ಲಿ ದಾಖಲಾಗಿರುವ ಡಾಟಾ ನೈಜವಾಗಿದೆ, ಆದ್ದರಿಂದ ವಿಮಾ ಪರಿಹಾರವನ್ನು ರೈತರಿಗೆ ವಿಮಾ ಕಂಪನಿ ನೀಡಲೇಬೇಕು ಎಂದು ಆದೇಶ ಮಾಡಿದೆ. ಈ ಸಂದರ್ಭದಲ್ಲಿ ವಿಮಾ ಕಂಪನಿಯವರು 2024-25 ನೇ ಸಾಲಿನಲ್ಲಿ ಸಂಗ್ರಹಿಸಿರುವ ರೈತರ ವಂತಿಗೆ ಸರಕಾರಗಳ ವಂತಿಗೆ ಒಟ್ಟು 80 ಕೋಟಿ ರೂಪಾಯಿಗಳಾಗಿದ್ದು ಅದನ್ನು ಮರಳಿಸುತ್ತೇವೆ ಎಂದು ಹೇಳಿತ್ತು.
ಆದರೆ ಇನ್ಸೂರೆನ್ಸ್ ಕಾಯ್ದೆಯಂತೆ ಒಮ್ಮೆ ಪ್ರೀಮಿಯಂ ಸ್ವೀಕರಿಸಿದ ನಂತರದಲ್ಲಿ ಸಂಪೂರ್ಣವಾಗಿ ಕರಾರನ್ನು ಪೂರ್ತಿಗೊಳಿಸದೆ ಏಕ ಪಕ್ಷಿಯವಾಗಿ ವಿಮಾ ಕಂಪನಿ ಹಿಂದೆ ಸರಿಯಲಾಗದು ಮತ್ತು ಏಳು ದಿನಗಳ ಅವಧಿಯಲ್ಲಿ ರೈತರಿಗೆ ನೀಡಬೇಕಾದ 104 ಕೋಟಿ ರೂಪಾಯಿಗಳನ್ನು ವಿಮಾ ಕಂಪನಿ ನೀಡಬೇಕು. ಇಲ್ಲದಿದ್ದಲ್ಲಿ ವಿಮಾ ಕಂಪನಿಯ ವಿರುದ್ಧ ಕೇಂದ್ರ ಸರಕಾರ ಹಣಕಾಸು ದಂಡನೆಯನ್ನು ವಿಧಿಸುವುದಲ್ಲದೆ ಆಡಳಿತಾತ್ಮಕವಾದ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಇನ್ಸೂರೆನ್ಸ್ ಕಂಪನಿಗೆ ಸ್ಪಷ್ಟ ಆದೇಶವನ್ನು ಮಾಡಿದೆ.
ಕರ್ನಾಟಕ ಸರಕಾರ ಆಡಳಿತದಲ್ಲಿ ತೋರಿರುವ ನಿರ್ಲಕ್ಷದಿಂದ ಆಗಿರುವ ಈ ಸಮಸ್ಯೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸರಕಾರದ ಮಟ್ಟದಲ್ಲಿ ವಿಶೇಷವಾಗಿ ಪ್ರಯತ್ನಿಸಿ ವಿಮಾ ಕಂಪನಿಗೆ ಬಿಸಿ ಮುಟ್ಟಿಸಿ ವಿಮಾ ಹಣವನ್ನು ತಕ್ಷಣ ನೀಡುವಂತೆ ಆದೇಶ ಮಾಡಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತೇನೆ. ಕೇಂದ್ರ ಸರಕಾರದ ಆದೇಶದಂತೆ ರೈತರಿಗೆ ಶೀಘ್ರದಲ್ಲಿಯೇ ವಿಮಾ ಪರಿಹಾರ ಜಮಾ ಆಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತೇನೆ. ರೈತರಿಗೆ ಪಾಲಿಗೆ ಬರಬೇಕಾದ ವಿಮಾ ಹಣ ಜಮಾ ಆಗುವ ವರೆಗೂ ಸಹ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಶ್ರಮಿಸುತ್ತದೆ. ಜನಹಿತಕ್ಕಾಗಿ ಶ್ರಮಿಸುವ ಕಾಗೇರಿಯವರ ಪರಿಶ್ರಮವನ್ನು ಶ್ಲಾಘಿಸುತ್ತೇವೆ ಎಂದು ಸದಾನಂದ ಭಟ್ ನಿಡಗೋಡ ತಿಳಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS






















