ಅದೊಂದು ಮಾದರಿಯಾದ ಕಾರ್ಯಕ್ರಮ…ಕಳೆದ 22 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಈಗ ಸೇವಾ ನಿವೃತ್ತಿಹೊಂದಿದ ಇಬ್ಬರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟ ಅಪರೂಪದ ಕ್ಷಣ..

ಯಲ್ಲಾಪುರ ತಾಲೂಕಿನ ಅಲ್ಕೇರಿ ಗೌಳಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಇಂಥದ್ದೊಂದು ಕಾರ್ಯಕ್ರಮ ನಡೆಯಿತು. ಈ ಶಾಲೆಯಲ್ಲಿ 22 ವರ್ಷಗಳ ಕಾಲ ಅಡುಗೆ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿ ತಮ್ಮ ಸೇವೆಯಿಂದ ನಿವೃತ್ತರಾದ ಭಾಗಿ ಬಿಚುಕ್ಲೆ ಮತ್ತು ಗಂಗಿ ಮಲಗೊಂಡೆ ಅವರನ್ನು ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಇವರು ತಮ್ಮ ಅಚ್ಚುಕಟ್ಟಾದ ಕೆಲಸದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪಾಲಕರು, ಎಸ್.ಡಿ.ಎಂ.ಸಿ ಸದಸ್ಯರು, ಊರ ಜನರು ಎಲ್ಲರೂ ಕೂಡ ಈ ಇಬ್ಬರ ಕರ್ತವ್ಯ ಪರತೆಯನ್ನು ಶ್ಲಾಘಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ವಾಣಿ ನಾಯ್ಕ ಸ್ವಾಗತಿಸಿ, ಅಡುಗೆ ಸಿಬ್ಬಂದಿಗಳಾದ ಭಾಗಿ ಬಿಚುಕ್ಲೆ ಮತ್ತು ಗಂಗಿ ಮಲಗೊಂಡೆ ಇವರ ಕರ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಗೌರವಿಸಿದರು. ಉದ್ಯೋಗ ಯಾವುದೇ ಆಗಿರಲಿ ಅದನ್ನ ಗೌರವಿಸಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ಮುಖ್ಯ ಎಂದರು. ಸಹ ಶಿಕ್ಷಕ ಆದರ್ಶ ಜಿ.ಟಿ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷವಾದ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು. ಈ ಇಬ್ಬರು ಅಡಿಗೆ ಸಿಬ್ಬಂದಿಗಳು ಎಲ್ಲರಿಗೂ ಸಿಹಿಯನ್ನು ವಿತರಿಸಿದರು. ಪಾಲಕರು, ಎಸ್.ಡಿ.ಎಂ.ಸಿ ವೃಂದದವರು ,ಹಳೆಯ ವಿದ್ಯಾರ್ಥಿಗಳು, ಊರ ನಾಗರಿಕರು ಮತ್ತು ಶಿಕ್ಷಕರು ಇವರೆಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading