ಎಲೆಚುಕ್ಕಿ ರೋಗದ ಕಾರಣ ಕೃಷಿ ಸಾಲ ಮರುಪಾವತಿ ಅವಧಿ ಮುಂದೂಡಿ: ಡಾ.ದಿಲೀಷ್ ಶಶಿ
ಜಿಲ್ಲೆಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದ ಕಾರಣ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ಕೃಷಿ ಮಾಧ್ಯಮಿಕ ಸಾಲ ಮತ್ತು ಕೆಸಿಸಿ ಸಾಲದ ಮರುಪಾವತಿಯನ್ನು ಮುಂದೂಡುವ ಕುರಿತಂತೆ ನಿರ್ಣಯವನ್ನು ಸಿದ್ದಪಡಿಸಿ ರಿಸರ್ವ್ ಬ್ಯಾಂಕ್‍ಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು. ಅವರು ಶುಕ್ರವಾರÀ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ,ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗದ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಲ್ಲಿ ಕೃಷಿಕ ಸದಸ್ಯರು ಏಪ್ರಿಲ್ 15 ಕ್ಕೆ ಮರುಪಾವತಿಸಬೇಕಾದ ಕೃಷಿ ಮಾಧ್ಯಮಿಕ ಸಾಲದ ಕಂತುಗಳನ್ನು ಒಂದು ವಷರ್Àದ ಅವಧಿಗೆ ಮುಂದೂಡುವ ಹಾಗೂ ಏಪ್ರಿಲ್ 30 ಕ್ಕೆ ತುಂಬಬೇಕಾದ ಕೆ.ಸಿ.ಸಿ ಸಾಲವನ್ನು ಒಂದು ವರ್ಷದ ವರೆಗೆ ವಢಾಯಿಸಿ ಕೊಡುವ ಕುರಿತಂತೆ, ಶಿರಸಿಯ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಸೊಸೈಟಿಯ ಅಧಿಕಾರಿಗಳು, ಕೃಷಿಕರ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪರವಾಗಿ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ಅವರು, ಜಿಲ್ಲೆಯ ಅಡಿಕೆ ಬೆಳೆಗಾರರ ಸಂಕಷ್ಟ ಪರಿಸ್ಥಿತಿಯ ಕುರಿತು ಸಹಮತ ವ್ಯಕ್ತಪಡಿಸಿ, ಸಾಲ ಮರುಪಾವತಿ ಅವಧಿ ಮುಂದೂಡುವ ಬಗ್ಗೆ ಸಭೆಯ ನಿರ್ಣಯ ಸಿದ್ದಪಡಿಸಿ ಕಳುಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಬ್ಯಾಂಕ್‍ಗಳ ಸಾಲ ಮತ್ತು ಠೇವಣಿ ಅನುಪಾತ ಶೇ.46.6 ಇದ್ದು, ಈ ಪ್ರಮಾಣವು ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕನಿಷ್ಠ ಶೇ.60 ಇರಬೇಕಾಗಿದೆ. ಬ್ಯಾಂಕ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು ವಿತರಣೆ ಮಾಡುವಂತೆ ತಿಳಿಸಿದ ಅವರು, ವಸತಿ ಹಾಗೂ ಶೈಕ್ಷಣಿಕ ಉದ್ದೇಶ, ಸ್ವ ಉದ್ಯೋಗ ಕೈಗೊಳ್ಳುವವರು, ಸರಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸದೇ, ಅರ್ಜಿಗಳಲ್ಲಿನ ದೋಷಗಳನ್ನು ಸರಿಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸಾಲದ ಅರ್ಜಿಗಳನ್ನು ಮಂಜೂರು ಮಾಡುವಂತೆ ತಿಳಿಸಿದರು. ಬ್ಯಾಂಕ್‍ಗಳಲ್ಲಿ ದೊರೆಯುವ ವಿವಿಧ ಸಾಲ ಯೋಜನೆಗಳ ಕುರಿತಂತೆ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮತ್ತು ಖಾಸಗಿ ಬ್ಯಾಂಕ್ ಗಳು ಸಾಲ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ಪರಿಶೀಲನೆ ನಡೆಸುವಂತೆ ತಿಳಿಸಿದರು.
ಪ್ರಸಕ್ತ ಸಾಲಿನ ಡಿಸೆಂಬರ್ ವರೆಗೆ ಜಿಲ್ಲೆಯ ಬ್ಯಾಂಕ್‍ಗಳಲ್ಲಿ ರೂ.25208 ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ.12013 ಕೋಟಿ ಸಾಲ ವಿತರಿಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಲೆಕ್ಕಾಧಿಕಾರಿ ಆನಂದ್ ಸಾ ಹಬೀಬ್, ನಬಾರ್ಡ್ ಮೆನೇಜರ್ ಸುಶೀಲ್ ನಾಯ್ಕ, ಲೀಡ್ ಬ್ಯಾಂಕ್ ಮೆನೇಜರ್ ರಾಜಪ್ಪ, ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.