ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಸರ್ವರ ಸಬಲೀಕರಣ ಅವಕಾಶಗಳ ಅನಾವರಣ, ನವ ಕರ್ನಾಟಕ ನಿರ್ಮಾಣ ಎಂಬ ದೃಷ್ಠಿಕೋನವನ್ನು ಪ್ರತಿಬಿಂಬಿಸುವಂತಹ ಜನಪರ ಬಜೆಟ್ ಆಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬಜೆಟ್‍ನಲ್ಲಿ ನಾಡಿನ ಅನ್ನದಾತರಾದ ರೈತರ ಹಿತಾಸಕ್ತಿ ಕಾಪಾಡುವ ಹಲವು ಯೋಜನೆಗಳಿಗೆ ಆದ್ಯತೆ ನೀಡಿರುವುದು ಸಂತೋಷಕರ ಸಂಗತಿಯಾಗಿದೆ. ಕೃಷಿ, ಮೀನುಗಾರಿಕೆ ಹಾಗೂ ಶ್ರಮಿಕ ವರ್ಗದ ಸಮಗ್ರ ಕಲ್ಯಾಣಕ್ಕೆ ಹೊಸ ಯೋಜನೆಗಳನ್ನು ಘೋಷಿಸಿರುವುದು ಗ್ರಾಮೀಣ ಆರ್ಥಿಕತೆಗೆ ಬಲ ತುಂಬುವ ಕಾರ್ಯವಾಗಿದೆ. ವಿಶೇಷವಾಗಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಗಣಕೀಕರಣ (ಡಿಜಿಟಲೀಕರಣ) ಯೋಜನೆಗಳಿಗೆ ಉತ್ತೇಜನ ನೀಡಿರುವುದು ಸಹಕಾರಿ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ರೈತರು ಮತ್ತು ಸದಸ್ಯರಿಗೆ ಇನ್ನಷ್ಟು ಸುಗಮ ಸೇವೆ ದೊರಕುವಂತೆ ಮಾಡಲಿದೆ ಎಂದು ಅವರು ಹೇಳಿದರು.

ನಮ್ಮ ಉತ್ತರ ಕನ್ನಡ ಜಿಲ್ಲೆಯ ಬಹುಕಾಲದ ಪ್ರಮುಖ ಬೇಡಿಕೆಯಾದ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಈ ಬಜೆಟ್ ಮಹತ್ವದ ಕೊಡುಗೆ ನೀಡಿದೆ. ಕಾರವಾರದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 198 ಕೋಟಿ ರೂಪಾಯಿ ವೆಚ್ಚದಲ್ಲಿ 450 ಹಾಸಿಗೆ ಸಾಮಥ್ರ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿರುವುದು ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ನೆರವಾಗಲಿದೆ. ಇದರಿಂದ ಜಿಲ್ಲೆಯ ಜನರು ಉನ್ನತ ಮಟ್ಟದ ಚಿಕಿತ್ಸೆಗೆ ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು. ಜಲ ಸಂಪನ್ಮೂಲ ಮತ್ತು ನೀರಾವರಿ ಕ್ಷೇತ್ರಕ್ಕೂ ಬಜೆಟ್‍ನಲ್ಲಿ ಮಹತ್ವದ ಆದ್ಯತೆ ನೀಡಲಾಗಿದೆ. ನೀರಾವರಿ ಯೋಜನೆಗಳ ವಿಸ್ತರಣೆ ಹಾಗೂ ಜಲ ಸಂರಕ್ಷಣೆ ಕ್ರಮಗಳು ಕೃಷಿ ಕ್ಷೇತ್ರಕ್ಕೆ ಶಾಶ್ವತ ಬಲ ನೀಡಲಿವೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ವಿಸ್ತರಣೆ, ಆಸ್ಪತ್ರೆಗಳ ಸುಧಾರಣೆ ಮತ್ತು ಹೊಸ ವೈದ್ಯಕೀಯ ಸೌಲಭ್ಯಗಳ ಸ್ಥಾಪನೆ ಮೂಲಕ ಜನರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೂ ಬಜೆಟ್‍ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿರುವುದು ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ. ಶಿಕ್ಷಣ, ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಈ ವರ್ಗಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯದ ಸಮೃದ್ಧ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿರುವ ಹವ್ಯಕ ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಗೆ ಹವ್ಯಕ ಭಾಷಾ ಅಕಾಡಮಿ ಸ್ಥಾಪನೆಗೆ ಬಜೆಟ್‍ನಲ್ಲಿ ಘೋಷಣೆ ಮಾಡಿರುವುದು ಅತ್ಯಂತ ಶ್ಲಾಘನೀಯವಾದ ನಿರ್ಧಾರವಾಗಿದೆ. ಇದರಿಂದ ಹವ್ಯಕ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಅಧ್ಯಯನ, ಸಂಶೋಧನೆ ಮತ್ತು ಪ್ರಚಾರಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದ್ದು, ಸರ್ವರ ಸಬಲೀಕರಣದ ಮೂಲಕ ನವ ಕರ್ನಾಟಕ ನಿರ್ಮಾಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಕರ್ನಾಟಕದ ಪಾಲಿಗೆ ಭರವಸೆಗಿಂತ ಹೆಚ್ಚಾಗಿ ಆರ್ಥಿಕ ಸಂಕಷ್ಟವನ್ನೇ ತಂದೊಡ್ಡಿದೆ. ಅಭಿವೃದ್ಧಿಗಿಂತ ಕೇವಲ ಜನಪ್ರಿಯ ಯೋಜನೆಗಳ ಹೆಸರಿನಲ್ಲಿ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಯಿಸಿದ ಅವರು, ಈ ಮೂಲಕ ಸಿದ್ದರಾಮಯ್ಯನವರು ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಈ ಬಜೆಟ್ ರಾಜ್ಯದ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿ ಹೊಂದಿಲ್ಲದ ಮತ್ತು ಸಾಮಾನ್ಯ ಜನರ ಮೇಲೆ ಸಾಲದ ಹೊರೆ ಹೊರಿಸುವ ಒಂದು ನಿರಾಶಾದಾಯಕ ಆಯವ್ಯಯವಾಗಿದೆ. ಸಮಗ್ರ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಮಹತ್ವದ ಯೋಜನೆಗಳನ್ನು ಘೋಷಿಸದೆ, ಕೇವಲ ಸಾಂಕೇತಿಕವಾಗಿ ಆಸ್ಪತ್ರೆಯ ಸ್ಥಾಪನೆಯ ಭರವಸೆ ನೀಡಿರುವುದು ಜನತೆಗೆ ಹೆಚ್ಚಿನ ಪ್ರಯೋಜನ ನೀಡುವುದಿಲ್ಲ. ಘೋಷಿತ ಯೋಜನೆಗಳು ಕೇವಲ ಬಜೆಟ್ ಪುಸ್ತಕಕ್ಕೆ ಸೀಮಿತವಾಗದೆ ಶೀಘ್ರವಾಗಿ ಅನುಷ್ಠಾನಕ್ಕೆ ಬರಲಿ ಎಂದಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading