ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಡಿ. ಜನಾರ್ಧನ ಮಾತನಾಡಿ, ಇಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ಸಾಹಿತ್ಯ, ಕ್ರೀಡೆ, ಆಡಳಿತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮಥ್ರ್ಯವನ್ನು ತೋರಿಸಿ ಮಹತ್ವದ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಪರಿಶ್ರಮ ಮತ್ತು ಕೊಡುಗೆ ಇಲ್ಲದೆ ಸಮಾಜ ತನ್ನ ಶಕ್ತಿಯ ಅರ್ಧಭಾಗವನ್ನು ಕಳೆದುಕೊಂಡಂತೆ ಆಗುತ್ತದೆ. ಆದ್ದರಿಂದ ಮಹಿಳೆಯರಿಗೆ ಸಮಾನ ಅವಕಾಶ, ಗೌರವ ಮತ್ತು ಬೆಂಬಲ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಮಹಿಳಾ ಸಬಲೀಕರಣ ವೇದಿಕೆಯ ಸಂಚಾಲಕಿ ಶಾಂತೇರಿ ದಾಮೋದರ ಪೈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ, ಅದರ ಹಿನ್ನೆಲೆ ಹಾಗೂ ಉದ್ದೇಶಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಅರೆಬೈಲ್‍ನ ಶಿಕ್ಷಕಿ, ಕವಯತ್ರಿ ಶಿವಲೀಲಾ ಹುಣಸಗಿ ಹಾಗೂ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶ್ರೀದೇವಿ ಜಿ. ನಾಯ್ಕ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜ್ಯೋತಿ ನರೋಟಿ ಅವರು ಮಾತನಾಡಿ, ಒಂದು ಕಾಲದಲ್ಲಿ ಮಹಿಳೆಯರು ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇತ್ತು. ಆದರೆ ಇಂದು ಅವರು ವಿಜ್ಞಾನದಿಂದ ಹಿಡಿದು ಕ್ರೀಡೆ, ಆಡಳಿತದಿಂದ ಹಿಡಿದು ಸಾಹಿತ್ಯದವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಶ್ರೀರಂಗ ಕಟ್ಟಿ, ಐಕ್ಯೂಎಸಿ ಸಂಚಾಲಕ ಡಾ. ಓಂ ಪ್ರಕಾಶ್ ನಾಯ್ಕ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಪೂಜಾರಿ, ಹೇಮಾವತಿ ಭಟ್ಟ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಡಾ. ರುಬಿನಾ ಖಾತೂನ್ ಹಾಗೂ ನಾಗಶ್ರೀ ಜಡ್ಡಿಪಾಲ ಪರಿಚಯಿಸಿದರು. ಲಕ್ಷ್ಮೀ ಪಾಂಡ್ರಾಮಿಸೆ ಪ್ರಾರ್ಥಿಸಿದರು.ವೈಶಾಲಿ ದೇವಲಿ ಸ್ವಾಗತಿಸಿದರು. ಸಕೀನಾ ಶೇಖ್ ನಿರೂಪಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading