ಯಲ್ಲಾಪುರ ಟಿ.ಎಂ.ಎಸ್.ಸಂಸ್ಥೆಯ ಆಡಳಿತಾಧಿಕಾರಿಯು ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ದೈನಂದಿನ ಆಡಳಿತವನ್ನು ಮಾತ್ರ ನೋಡಿಕೊಳ್ಳುವ ಹೊಣೆ ಹೊಂದಿರುವ ಆಡಳಿತಾಧಿಕಾರಿಯು ಸಂಸ್ಥೆಯ ಸದಸ್ಯರಿಗೆ ಹಾಗೂ ಸಂಸ್ಥೆಗೆ ಪ್ರತಿಕೂಲವಾಗುವಂತಹ ಪ್ರಮುಖ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಟಿ.ಎಂ.ಎಸ್.ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಆರೋಪಿಸಿದ್ದಾರೆ.

ಯಲ್ಲಾಪುರ ಪಟ್ಟಣದ ಶಕ್ತಿಗಣಪತಿ ದೇವಾಲಯದ ಸಭಾಭವನದಲ್ಲಿ ಮಂಗಳವಾರ ರೈತ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಾಧಿಕಾರಿಯ ಇಂತಹ ಧೋರಣೆಯನ್ನು ಖಂಡಿಸಿ ಮತ್ತು ಆಡಳಿತಾಧಿಕಾರಿಯ ವಜಾಕ್ಕೆ ಆಗ್ರಹಿಸಿ ಮಾ.11 ಬುಧವಾರ ಬೆಳಿಗ್ಗೆ 10 ಗಂಟೆಗೆ ಯಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.

ಆಡಳಿತಾಧಿಕಾರಿಯಿಂದ ರೈತರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಇಂತಹ ಅಧಿಕಾರಿಯನ್ನು ವಜಾ ಮಾಡಬೇಕು, ಬುಧವಾರ ಟಿ.ಎಂ.ಎಸ್. ಸಂಸ್ಥೆಯ ಎದುರು ನಡೆಯುವ ಪ್ರತಿಭಟನೆಗೆ ಸ್ಪಂದಿಸಿ ಹಿರಿಯ ಅಧಿಕಾರಿಗಳು ಆಡಳಿತಾಧಿಕಾರಿಯನ್ನು ವಜಾ ಮಾಡದೇ ಇದ್ದರೆ ಗುರುವಾರ ಯಲ್ಲಾಪುರ –ಶಿರಸಿ ರಸ್ತೆ ತಡೆ ನಡೆಸಲಿದ್ದೇವೆ. ರೈತರ ಹಾಗೂ ರೈತರ ಜೀವನಾಡಿಯಾದ ಟಿ.ಎಂ.ಎಸ್ ಸಂಸ್ಥೆಯ ಉಳಿವಿಗಾಗಿ ನಮ್ಮ ಹೋರಾಟ ನಡೆಯಲಿದೆ. ಯಾರದ್ದೋ ಒತ್ತಡ ಮತ್ತು ವಾಮ ಮಾರ್ಗದ ಮೂಲಕ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಸಂಸ್ಥೆಯ ಸದಸ್ಯರ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದರು.

ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ಸುಬ್ಬಣ್ಣ ಬೋಳ್ಮನೆ, ನಾಗರಾಜ ಕವಡಿಕೆರೆ, ಜಿ.ವಿ.ಹೆಗಡೆ ಹಿತ್ಲಳ್ಳಿ, ಅಪ್ಪು ಆಚಾರಿ, ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ, ರಾಜೇಂದ್ರ ಗೌಡ, ರವಿ ಬಿಡಾರ, ಗಣಪತಿ ಮಾನಿಗದ್ದೆ, ಗೋಪಾಲಕೃಷ್ಣ ಗಾಂವ್ಕಾರ್, ವಿ.ಎನ್.ಬೆಳ್ಳಿ, ಕೆ.ಟಿ.ಹೆಗಡೆ ಮುಂತಾದವರು ಇದ್ದರು. ಇದಕ್ಕೂ ಮೊದಲು ಸಭೆ ನಡೆಸಿದ ರೈತರು, ಸಹಕಾರಿ ಮುಖಂಡರು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading