ಪ್ರೇಕ್ಷಕರನ್ನು ರಂಜಿಸಿದ ಭಾರತೀ ನೃತ್ಯ ಕಲಾಕೇಂದ್ರದ ನೃತ್ಯ ಸಂಭ್ರಮ
ಯಲ್ಲಾಪುರ ಪಟ್ಟಣದ ಭಾರತೀ ನೃತ್ಯ ಕಲಾಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿಇಲಾಖೆ ಕಾರವಾರ ಇವರ ಆಶ್ರಯದಲ್ಲಿ ಸೋಮವಾರ ಸಂಜೆ ಪಟ್ಟಣದ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ನಡೆದ ನೃತ್ಯ ಸಂಭ್ರಮ ಭರತನಾಟ್ಯ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಮಾತನಾಡಿ, ಅನೇಕ ವರ್ಷಗಳಿಂದ ಯಲ್ಲಾಪುರದಲ್ಲಿ ಹಾಗೂ ಜಿಲ್ಲೆಯ ವಿವಿದೆಡೆ ಭರತನೃತ್ಯ ತರಬೇತಿ ನೀಡುತ್ತಿರುವ
ಭಾರತೀ ನೃತ್ಯ ಕಲಾಕೇಂದ್ರದ ವಿದುಷಿ ಸುಮಾ ಹೆಗಡೆಯವರು ತಾಯಿ ಪ್ರೀತಿಯಿಂದ ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲೆಯನ್ನು ಧಾರೆಎರೆಯುತ್ತಿದ್ದಾರೆ. ನಿರಂತರವಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ಶ್ರಮ, ಪ್ರಯತ್ನ ಶ್ಲಾಘನೀಯವಾದ್ದು ಎಂದರು.
ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿ ಅಪರ್ಣಾ ಘಟ್ಟಿ ಹಾಗೂ ಸವಿತಾ ಭಟ್ಟ, ವಿದುಷಿ ಸುಮಾ ಹೆಗಡೆ, ಭಾರತೀ ನೃತ್ಯ ಕಲಾಕೇಂದ್ರದ ಅಧ್ಯಕ್ಷ ವಿ.ಟಿ.ಹೆಗಡೆ ಮುಂತಾದವರು ಇದ್ದರು. ಭಾರತೀ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.
ನೃತ್ಯ ಸಂಭ್ರಮದಲ್ಲಿ ನಟುವಾಂಗದಲ್ಲಿ ವಿದುಷಿ ಸುಮಾ ವೆಂಕಟ್ರಮಣ ಹೆಗಡೆ, ಹಾಡುಗಾರಿಕೆಯಲ್ಲಿ ವಾಣಿ ಉಡುಪಿ, ಮೃದಂಗ ವಾದನದಲ್ಲಿ ವಿದ್ವಾನ್ ಪದ್ಮರಾಜ ಕೇರಳ, ವಯಲೀನ್ ನಲ್ಲಿ ಶಂಕರ ಕಬಾಡಿ ಧಾರವಾಡ, ರಿದಮ್ ನಲ್ಲಿ ರಾಘು ರಂಗದೋಳ್ ಪಾಲ್ಗೊಂಡಿದ್ದರು. ಪುಷ್ಪಾಂಜಲಿ, ಅಲಾರಿಪು, ಜತಿಸ್ವರ, ಗಣೇಶ ಸ್ತುತಿ, ಕೌತುಕಂ, ದೇವರ ನಾಮಗಳು, ತಿಲ್ಲಾನಾ, ಜಾನಪದ ನೃತ್ಯಗಳ ಆಕರ್ಷಕ ಪ್ರದರ್ಶನ ನಡೆಯಿತು.