ಆಸ್ತಿಯಲ್ಲಿ ಪಾಲು ಕೇಳಿದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.
ಹಳಿಯಾಳ ಪೊಲೀಸ್ ಠಾಣೆ ವ್ಯಾಪ್ತಿಯ ಬಿದೊಳ್ಳಿ ಗ್ರಾಮದ ಕೇಶವ ಕೊಲೆ ಅರೋಪಿತರ ಪೈಕಿ 5 ಜನರಲ್ಲಿ ಅಕ್ಷಯ ಯಾನೆ ಆಕಾಶ ಕಿತ್ತೂರಕರ್, ಪಾಂಡುರಂಗ ಕಿತ್ತೂರಕರ್, ಲತಾ ಯಾನೆ ತುಳುಸಾಯಿ ಕಿತ್ತೂರಕರ್ ಇವರ ಮೇಲಿನ ಅಪರಾಧ ರುಜುವಾತಾಗಿದ್ದು, ಅರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ. 25,000 ದಂಡ ನೀಡುವಂತೆ ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.
ಪ್ರಕಣದ ಹಿನ್ನಲೆ:
ಹಳಿಯಾಳ ಪೊಲೀಸ್ ಠಾಣೆ ವ್ಯಾಪ್ತಿಯ ಬಿದೊಳ್ಳಿ ಗ್ರಾಮದ ಪಾಂಡುರಂಗ ಕಿತ್ತೂರಕರ್ ನ ಮೊದಲ ಹೆಂಡತಿ ಮಗನಾದ ಕೇಶವ ಆಸ್ತಿಯಲ್ಲಿ ತನ್ನ ಪಾಲು ಕೇಳಿದಾಗ, ಪಾಲು ಕೊಡುವುದನ್ನು ತಪ್ಪಿಸಲೆಂದು ಪ್ಲಾಸ್ಟಿಕ್ ಹಗ್ಗದಿಂದ ಮೈಮೇಲೆ ಹೊಡೆದು, ಕೊರಳನ್ನು ಕಂಬಕ್ಕೆ ಹಗ್ಗದಿಂದ ಕಟ್ಟಿ ಆತನನ್ನು ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡಲಾಗಿತ್ತು.
ಪ್ರಕರಣದ ಕುರಿತು ಅಂದಿನ ತನಿಖಾಧಿಕಾರಿಯಾದ ಹಳಿಯಾಳ ಪೊಲೀಸ್ ಠಾಣೆ ಉಪನಿರೀಕ್ಷಕ ಬಿ.ಎಸ್ ಲೋಕಾಪೂರ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿ ವಿಚಾರಣೆ ನಡೆಸಲಾಗಿತ್ತು.
ಹಳಿಯಾಳ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಹನುಮಂತ ಬರ್ಗಿ ಇವರು ವಿಚಾರಣೆ ಕಾಲಕ್ಕೆ ನ್ಯಾಯಾಲಯದಲ್ಲಿ ಸಾಕ್ಷಿದಾರರನ್ನು ಹಾಜರುಪಡಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ಆರೋಪಿತರಿಗೆ ಶಿಕ್ಷೆ ವಿಧಿಸಬೇಕೆಂದು ಸರಕಾರದ ಪರವಾಗಿ ಸುದೀರ್ಘ ವಾದ ಮಂಡಿಸಿದ್ದರು.