ಸೃಜನಶೀಲತೆಯು ವಿದ್ಯಾರ್ಥಿಗಳ ಸಾಧನೆಯ ಪ್ರತಿಬಿಂಬವಾಗಿದೆ: ಬಿಇಒ ರೇಖಾ ನಾಯ್ಕ
ಗ್ರಾಮೀಣ ಪ್ರದೇಶದಲ್ಲಿನ ಕಲಿಕೆಯು ಅನನ್ಯವಾದ ಅನುಭವವನ್ನು ನೀಡುತ್ತದೆ. ಶಿಕ್ಷಕ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿ ಸಮಾಜಕ್ಕೆ ಪರಿಚಯಿಸಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಬೀಗಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಾಧನಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸತತವಾದ ಪರಿಶ್ರಮದಿಂದ ಉತ್ತಮ ಫಲಶೃತಿ ದೊರಕುತ್ತದೆ. ಸುಪ್ತ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುವ ಕೆಲಸ ನಿರಂತರವಾಗಿ ನಾವು ನೀಡಬೇಕಿದೆ. ಒತ್ತಡದ ಜೀವನದಲ್ಲಿ ಸೃಜನಶೀಲತೆಯ ಚಟುವಟಿಕೆಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪತ್ರಕರ್ತರಾದ ವಿನುತಾ ಹೆಗಡೆ, ದತ್ತಾತ್ರೇಯ ಭಟ್ಟ,ಶಿಕ್ಷಣ ಸಂಯೋಜಕ ಸುಧಾಕರ ನಾಯ್ಕ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಿಜಯಾ ಗಾಂವ್ಕರ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹ ಕೋಮಾರ ಉಪ್ಪರಿಗೆಮನೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಬೀಳ್ಕೊಡಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಮಂಜುನಾಥ ಟಿ ನಾಯಕ ಸ್ವಾಗತಿಸಿದರು. ಶಿಕ್ಷಕ ಸುರೇಶ ಎಸ್ ಗೌಡ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ಡಯಾಸ್ ವಂದಿಸಿದರು.