ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರಧ್ದಾನಂದಗಲ್ಲಿಯ ರಂಗನಾಥ ಮಡಗಾಂವಕರ ಕೊಲೆ ಆರೋಪಿತರಾದ ರಮೇಶ ಮಡಗಾಂವಕರ ನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.25,000 ದಂಡ, 50,000 ಪರಿಹಾರ ನೀಡುವಂತೆ ಹಾಗೂ ಎರಡನೇ ಆರೋಪಿ ಸಾವಿತ್ರಿ ಮಡಗಾಂವಕರಗೆ 2,000 ದಂಡ ವಿಧಿಸಿ, ದೂರುದಾರಳಾದ ಶಕೂ ಇವಳಿಗೆ 2,000 ಪರಿಹಾರ ನೀಡುವಂತೆ ಮತ್ತು ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯುಬಹುದು ಎಂದು ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಶಿರಸಿ ನಗರ ಠಾಣಾ ವ್ಯಾಪ್ತಿಯ ಶ್ರಧ್ಧಾನಂದಗಲ್ಲಿಯ ಆರೋಪಿಗಳಾದ ರಮೇಶ ಗಜಾನನ ಮಡಗಾಂವಕರ ಹಾಗೂ ಆತನ ತಾಯಿ ಸಾವಿತ್ರಿ ಗಜಾನನ ಮಡಗಾಂವಕರ ಇಬ್ಬರು ಸೇರಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಗಲಾಟೆ ಮಾಡುತ್ತಾ ಬಂದಿದ್ದು, ದಿ.7-12-2015 ರಂದು ಶಕೂ ಕೊಂ ನಾರಾಯಣ ಮಡಗಾಂವಕರ ಇವರೊಂದಿಗೆ ಮನೆಯ ಹಿಂಬಾಗದಲ್ಲಿ ಕಸ ಸಲ್ಲಿರುವ ವಿಚಾರವಾಗಿ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈಯುತ್ತಿರುವಾಗ ಮೃತ ರಂಗನಾಥ ತನ್ನ ತಾಯಿಗೆ ಏಕೆ ಬೈಯತ್ತಿರೆಂದು ಪ್ರಶ್ನಿಸಿದಾಗ ರಮೇಶ ಮಡಗಾಂವಕರ ರಂಗನಾಥನನ್ನು ರಸ್ತೆಗೆ ಎಳೆದೊಯ್ದು, ಕೆಡವಿ ನೆಲಕ್ಕೆ ಬಿಳಿಸಿ ಆತನ ಎದೆ ಮತ್ತು ಹೊಟ್ಟೆಯಮೇಲೆ ಬಲವಾಗಿ ತುಳಿದು, ಗುದ್ದಿ ರಸ್ತೆಗೆ ಜಜ್ಜಿದ ಪರಿಣಾಮವಾಗಿ ರಂಗನಾಥ ಮಡಗಾಂವಕರ ಪ್ರಜ್ಞಾಹೀನನಾದ ಕೊಡಲೇ ಅರೋಪಿತರು ಮೃತನನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು, ಆಂಬುಲೇನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತ ಹೊಂದಿರುತ್ತಾನೆ.
ಶಿರಸಿ ನಗರ ಪೊಲೀಸ್ ಠಾಣೆಯ ಆಂದಿನ ತನಿಖಾಧಿಕಾರಿ ಆರ್.ಎಲ್.ಗಣಪತಿ ಆರೋಪಿತರನ್ನು ದಸ್ತಗಿರಿ ಮಾಡಿ ತನಿಖೆಗೊಳಪಡಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣಾ ಕಾಲಕ್ಕೆ ನಗರ ಠಾಣೆ ಹೆಚ್,ಸಿ ತುಕಾರಾಮ ಬಣಕಾರ ಸಾಕ್ಷಿದಾರರನ್ನು ಹಾಜರುಪಡಿಸಿ ಅಭಿಯೋಜನೆಗೆ ಸಹಕರಿಸಿದರು. ನಗರ ಠಾಣೆಯ ಪಿ.ಎಸ್.ಐ ನರಸಿಂಹಲು ಕೊರ್ಟ್ ಮಾನಿಟರಿಂಗ್ ಮಾಡಿ ವಿಚಾರಣೆಗೆ ಸಹಕರಿಸಿದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸುದೀರ್ಘ ವಾದ ಮಂಡಿಸಿದ್ದರು.