ಯಲ್ಲಾಪುರ ತಾಲೂಕಿನ ಹುಲಗಾನ ಶ್ರೀಲಕ್ಷ್ಮೀನರಸಿಂಹ ದೇವಾಲಯದ ವರ್ಧಂತಿ ಮಹೋತ್ಸವದ ನಿಮಿತ್ತ ಸೋಮವಾರ ರಾತ್ರಿ ದೇವಾಲಯದ ಆವರಣದಲ್ಲಿ ನಡೆದ ಯಕ್ಷಗಾನ ಪ್ರದರ್ಶನಕ್ಕೆ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಯಿತು.
ಶ್ರೀಕೃಷ್ಣ ಪಾರಿಜಾತ, ನರಕಾಸುರ ವಧೆ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಸಂಜನಾ ಹಿರೇಗುತ್ತಿ, ಮದ್ದಳೆವಾದನದಲ್ಲಿ ಗಣಪತಿ ಭಾಗ್ವತ್ ಕವಾಳೆ, ಚಂಡೆವಾದನದಲ್ಲಿ ಗಣೇಶ ಗಾಂವ್ಕಾರ್ ಪಾಲ್ಗೊಂಡಿದ್ದರು. ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ಲೋಕೇಶ ನಾಯ್ಕ ಗುಣವಂತೆ, ನಾಗೇಂದ್ರ ಭಟ್ಟ ಮೂರೂರು ಗುರುದತ್ತ ಭಟ್ಟ, ಶ್ರೀಧರ ಅಣಲಗಾರ, ದೀಪಕ ಕುಂಕಿ, ರಾಮಕೃಷ್ಣ ಭಟ್ಟ ಕಂಚನಗದ್ದೆ, ರಕ್ಷಿತ ಕುಳಿಮನೆ ಭಾಗವಹಿಸಿದ್ದರು.
ಉದ್ಘಾಟನೆ
ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿದ ಆನಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ನಾನಾ ಕಾರಣಗಳಿಂದ ಹಳ್ಳಿಗಳಲ್ಲಿ ಯುವಕರು, ಯುವತಿಯರು, ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪೇಟೆ,ಪಟ್ಟಣಗಳಿಗೆ, ಮಹಾನಗರಗಳಿಗೆ, ವಿದೇಶಗಳಿಗೆ ತೆರಳಿ ವಾಸಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಗ್ರಾಮೀಣ ಸಂಸ್ಕೃತಿಯನ್ನು ಮತ್ತು ಕೃಷಿ ಚಟುವಟಿಕೆಗಳನ್ನು ಉಳಿಸಿಕೊಂಡು ಹೋಗುವ ಸವಾಲು ಎದುರಾಗಿದೆ.
ಅನಾದಿಕಾಲದಿಂದಲೂ ಕೃಷಿ ಚಟುವಟಿಕೆಯ ಜೊತೆಯಲ್ಲಿ ಯಕ್ಷಗಾನದಂತಹ ಕಲೆಯನ್ನು ಪೋಷಿಸಿಕೊಂಡು ಬರಲಾಗಿದೆ. ಹಣ ಗಳಿಸುವ ಹಪಾಹಪಿ ಒಳ್ಳೆಯ ಬೆಳವಣಿಗೆಯಲ್ಲ. ನಮ್ಮ ಸನಾತನ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಒಳ್ಳೆಯ ಕೆಲಸಗಳಿಗೆ ದಾನ ಮಾಡುವುದನ್ನೂ ರೂಢಿಸಿಕೊಳ್ಳಬೇಕು. ಹುಲಗಾನ ದೇವಾಲಯದಲ್ಲಿ ವರ್ಧಂತಿ ಉತ್ಸವದಂತಹಧಾರ್ಮಿಕ ಕಾರ್ಯಕ್ರಮಗಳನ್ನು ಶೃದ್ಧೆಯಿಂದ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಎಸ್.ಭಟ್ಟ ತಟ್ಟಿಗದ್ದೆ ಮಾತನಾಡಿ, ಎಲ್ಲರ ಸಹಕಾರದಿಂದ ದೇವಾಲಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಸಾಕಾರಗೊಂಡಿವೆ, ದೇವಾಲಯದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡುಬರಲಾಗಿದೆ ಎಂದರು. ದೇವಾಲಯದ ಅಭಿವೃದ್ಧಿಗೆ ಸಹಕರಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ, ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ವೇ.ಶಿವರಾಮ ಭಟ್ಟ ಸೂಳಗಾರ, ಮೊಕ್ತೇಸರ ವೆಂಕಟ್ರಮಣ ಹೆಗಡೆ, ಸಮೀತಿಯ ಉಪಾಧ್ಯಕ್ಷ ಶ್ರೀಕೃಷ್ಣ ಭಟ್ಟ, ಖಜಾಂಚಿ ವಿಶ್ವನಾಥ ಭಟ್ಟ ತಟ್ಟಿಗದ್ದೆ ಮುಂತಾದವರು ಪಾಲ್ಗೊಂಡಿದ್ದರು. ನಾರಾಯಣ ಬೆಳ್ಳಿ ಸ್ವಾಗತಿಸಿ, ನಿರ್ವಹಿಸಿದರು.
ಯಕ್ಷಗಾನ ಪ್ರದರ್ಶನಕ್ಕೂ ಮೊದಲು ವೇದಿಕೆಯಲ್ಲಿ ಮಾತೆಯರಿಂದ ಭಗವದ್ಗೀತಾ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.