ರಾಜ್ಯ ವಿಜ್ಞಾನ ಶಿಕ್ಷಕರ ಸಂಘ ಅಸ್ತಿತ್ವಕ್ಕೆ: ಕಾರ್ಯದರ್ಶಿಯಾಗಿ ಎಂ.ರಾಜಶೇಖರ ಆಯ್ಕೆ
ಕರ್ನಾಟಕ ರಾಜ್ಯ ವಿಜ್ಞಾನ ಶಿಕ್ಷಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ಸಂಘದ ಕಾರ್ಯದರ್ಶಿಯಾಗಿ ಯಲ್ಲಾಪುರದ ಎಂ. ರಾಜಶೇಖರ ಆಯ್ಕೆಯಾಗಿದ್ದಾರೆ.
ಎಂ. ರಾಜಶೇಖರ
ವಿದ್ಯಾರ್ಥಿ, ಶಿಕ್ಷಕ, ವಿಜ್ಞಾನ ಇವುಗಳ ಅಭ್ಯುದಯ ಹಾಗೂ ಪ್ರಗತಿಯ ದೃಷ್ಟಿಕೋನದಿಂದ ಬದಲಾಗುತ್ತಿರುವ ಸನ್ನಿವೇಶದಲ್ಲಿ ಉತ್ತಮ ಗುಣಮಟ್ಟದ ಏಕರೂಪದ ಗುಣಾತ್ಮಕ ಶಿಕ್ಷಣ ವಿಜ್ಞಾನ ಕ್ಷೇತ್ರದ ನವ ನವೀನ ಶೋಧನೆ ಸಂಶೋಧನೆಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಹಾಗೂ ವಿಜ್ಞಾನ ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಪರಿಹಾರ, ಹಾಗೂ ರಾಜ್ಯಮಟ್ಟದಲ್ಲಿ ಏಕರೂಪತೆಯನ್ನು ತರುವ ಸಲುವಾಗಿ ಗುರುವಾರ ರಾಜ್ಯಮಟ್ಟದ ವಿಜ್ಞಾನ ಶಿಕ್ಷಕರ ಸಂಘವನ್ನು ಸರ್ಕಾರದ ನಿಯಮಾವಳಿಗಳಂತೆ, ನೋಂದಣಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್ ಪಾಟೀಲ್ ಕುಲಕರ್ಣಿ ಹೇಳಿದರು.
ಅವರು ಗುರುವಾರ ಧಾರವಾಡದ ಕರ್ನಾಟಕ ಭವನ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ಧೇಯೋದ್ದೇಶ ಹಾಗೂ ಸಂಘಟನೆಯ ಅವಶ್ಯಕತೆ ಕುರಿತು ಮಾತನಾಡಿದರು. ಬಹಳ ವರ್ಷಗಳಿಂದ ನಾವು ಕೇವಲ ಸಮೂಹ ಮಾಧ್ಯಮ, ವಾಟ್ಸಪ್ ಗಳಲ್ಲಿ ನಮ್ಮ ಸಮಸ್ಯೆಗಳನ್ನು ಪ್ರತಿ ಬಾರಿಯೂ ಹೇಳಿಕೊಂಡು ಸುಮ್ಮನಾಗುತ್ತಿದ್ದೆವು. ಸರ್ಕಾರದ ಮಟ್ಟದಲ್ಲಿ ಅದನ್ನು ಪ್ರತಿಪಾದಿಸುವಾಗ ನಮಗೆ ಸಂಘಟನೆಯ ಕೊರತೆ ಉಂಟಾಗುತ್ತಿತ್ತು. ಆ ಕೊರತೆಯನ್ನು ಇಂದು ನೀಗಿಸಲಾಗಿದೆ.
ಈ ಕುರಿತು ರಾಜ್ಯದ ಎಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನ ಶಿಕ್ಷಕರ ಸಹಯೋಗದೊಂದಿಗೆ ಸಂಘವನ್ನು ಬಲಪಡಿಸಲಾಗುವುದು ಎಂದು ನುಡಿದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ ನೂರಾರು ಶಿಕ್ಷಕರಲ್ಲಿ ಸಂಘಟನೆಯ ನೋಂದಣಿಯ ದೃಷ್ಟಿಯಿಂದ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿ ನೋಂದಣಿ ಮಾಡಲಾಯಿತು. ಸಂಘದ ಕಚೇರಿಯನ್ನು ಧಾರವಾಡದ ಶಿಕ್ಷಕ ಪ್ರಮೋದ್ ವಾದಿರಾಜರವರು ಸಂಘಕ್ಕೆ ಯಾವುದೇ ಶುಲ್ಕವಿಲ್ಲದೆ ನೀಡಿದ ಕೊಠಡಿಯಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯದ ನಾಲ್ಕು ವಿಭಾಗಗಳಿಂದ ನಾಲ್ಕು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಬಸವರಾಜ್, ಎಂ ರಾಜಶೇಖರ್ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಗಜಕೋಶ ಖಜಾಂಚಿಯಾಗಿ ಸಂತೋಷ್ ಕುಮಾರ ಸಂವಹನಕಾರರಾಗಿ ಹಾಗೂ ಪತ್ರಿಕಾ ಪ್ರತಿನಿಧಿಯಾಗಿ ಸಂಜೀವ ಕುಮಾರ್ ಭೂಶೆಟ್ಟಿ ಹಾಗೂ 14 ಜನ ನಿರ್ದೇಶಕರನ್ನು ನಿಯೋಜನೆಗೊಳಿಸಿ, ನೋಂದಣಿ ಮಾಡಲಾಗಿದೆ. ಸಂಘದ ನೋಂದಣಿಯಾದ ಪ್ರತಿಯ ನಂತರ ಅತಿ ಶೀಘ್ರದಲ್ಲಿ ರಾಜ್ಯದ ಎಲ್ಲಾ ಎಲ್ಲ ಜಿಲ್ಲೆಗಳಿಂದ ವಿಜ್ಞಾನ ಶಿಕ್ಷಕ ಪ್ರತಿನಿಧಿಗಳನ್ನು ಒಳಗೊಂಡ ರಾಜ್ಯದ ಕಾರ್ಯಕಾರಣಿ ಸಭೆಯನ್ನು ನಡೆಸಿ ಸಂಘದ ಮುಂದಿನ ಎಲ್ಲಾ ಕಾರ್ಯ ಚಟುವಟಿಕೆಗಳು, ಹಾಗೂ ಕಾರ್ಯಸೂಚಿಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಸಮಾವೇಶಗಳನ್ನು ನಡೆಸಿ ಸಂಘದ ಬಲವರ್ಧನೆಗೆ ಹಾಗೂ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು. ರಾಜ್ಯದ ಪ್ರತಿಯೊಂದು ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳ ವಿಜ್ಞಾನ ಶಿಕ್ಷಕರನ್ನು ಒಳಗೊಂಡ ಸಂಘವನ್ನು ಬಲಿಷ್ಠಗೊಳಿಸಿ ವಿದ್ಯಾರ್ಥಿ, ವಿಜ್ಞಾನ, ಹಾಗೂ ವಿಜ್ಞಾನ ಶಿಕ್ಷಕರ ಹಿತವನ್ನು ಕಾಯಲಾಗುವುದು : ಎಂ. ರಾಜಶೇಖರ