ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ರವರ ಮುನ್ಸೂಚನೆಯಂತೆ, ಉತ್ತರಕನ್ನಡ ಜಿಲ್ಲೆಯಲ್ಲಿ ಜೂನ್ 27 ರ ಬೆಳಿಗ್ಗೆ 8.30 ರ ವರೆಗೆ ಆರೆಂಜ್ ಅಲರ್ಟ್ ಇದ್ದು 30-40 ಕಿ.ಮೀ ಗಾಳಿಯ ವೇಗದೊಂದಿಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ
ಜಿಲ್ಲಾಡಳಿತವು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತೆಯನ್ನು ಈಗಾಗಲೇ ಕೈಗೊಂಡಿರುತ್ತದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಜಿಲ್ಲೆಯ ಹವಾಮಾನ ಪರಿಸ್ಥಿತಿಯ ಕುರಿತಂತೆ 24*7 ವರದಿಗಳನ್ನು ಜಿಲ್ಲಾಧಿಕಾರಿಗಳ ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಪರಿಶೀಲಿಸಬಹುದಾಗಿರುತ್ತದೆ. ಮೇಲೆ ತಿಳಿಸಿದ ಅವಧಿಯಲ್ಲಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗದಂತೆ ಸೂಚಿಸಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಹೋಗದಂತೆ ಸಾರ್ವಜನಿಕರು ಹಾಗೂ ಮುಖ್ಯವಾಗಿ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸುವುದು. ಪ್ರವಾಸಿಗರು, ಹಾಗೂ ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು. ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರವಿರುವುದು ಸಾರ್ವಜನಿಕರು / ಮಕ್ಕಳು /ಕಾರ್ಮಿಕರು ಮಳೆ ಬೀಳುವ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯುವುದು.
ಈ ಸಂದರ್ಭದಲ್ಲಿ ಮಕ್ಕಳು/ಸಾರ್ವಜನಿಕರು ಅಪಾಯಕಾರಿ ಮರ/ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರುವುದು. ದುರ್ಬಲವಾದ/ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ/ಮರಗಳ ಕೆಳಗೆ ನಿಲ್ಲಬಾರದು.ಮೇಲಿನ ಅಂಶಗಳನ್ನು ಗುಡುಗು ಸಿಡಿಲು/ ಮಳೆ ಗಾಳಿಯಂತಹ ಸಂದರ್ಭಗಳಲ್ಲಿ ಚಾಚೂ ತಪ್ಪದೇ ಕಡ್ಡಾಯವಾಗಿ ಪಾಲಿಸುವುದು. ಸಾರ್ವಜನಿಕರು ತಗ್ಗು ಪ್ರದೇಶದಲ್ಲಿ ಅಥವಾ ಮಳೆಯಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿ ವಾಸವಿದ್ದಲ್ಲಿ ಅಥವಾ ಶಿಥಿಲಾವಸ್ಥೆಯಿಂದ ಜಾರುವ ಹಂತದಲ್ಲಿರುವ ಕಂಪೌಂಡ್ ಅಥವಾ ಮನೆಯ ಗೋಡೆ. ಇಂತಹ ದುರ್ಬಲವಾದ ಕಟ್ಟಡದಲ್ಲಿ ವಾಸವಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು, ಅಗತ್ಯವಿದ್ದಲ್ಲಿ ಈಗಾಗಲೇ ಸಂಬಂಧಿಸಿದ ತಹಶೀಲ್ದಾರರಿಂದ ಗುರುತಿಸಲ್ಪಟ್ಟ ಕಾಳಜಿ ಕೇಂದ್ರದಲ್ಲಿ ಕಡ್ಡಾಯವಾಗಿ ಆಶ್ರಯ ಪಡೆದುಕೊಳ್ಳುವುದು. ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಾಲುಸಂಕ, ಕಿರು ಸೇತುವೆ ಇತ್ಯಾದಿಗಳನ್ನು ದಾಟುವ ಮುನ್ನ ಎಚ್ಚರಿಕೆ ವಹಿಸುವುದು. ಸಾರ್ವಜನಿಕರಿಗೆ ಈ ಮೇಲಿನ ಅಂಶಗಳಂತೆ ಶಿಥಿಲಾವಸ್ಥೆಯಿರುವ ಅಥವಾ ಕುಸಿತದ ಹಂತದ ಕಂಪೌಂಡ್ ಅಥವಾ ಮನೆಯಗೋಡೆ ಕಂಡುಬಂದಲ್ಲಿ ಈ ಕೆಳಗಿನ ದೂರವಾಣಿಗೆ ಮಾಹಿತಿ ನೀಡುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಸಂಖ್ಯೆ 08382-229857 ಗೆ ಅಥವಾ ವಾಟ್ಸಪ್ ನಂ: 9483511015 ಅಥವಾ ಆಯಾ ತಾಲೂಕಾ ತಹಶೀಲ್ದಾರರ ಕಛೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.