ಯಲ್ಲಾಪುರ: ತಾಲೂಕಾ ರೈತ ಸಂಘದ ವಾರ್ಷಿಕ ಸಭೆ, ವಿವಿಧ ವಿಷಯಗಳ ಚರ್ಚೆ
ಯಲ್ಲಾಪುರ ತಾಲೂಕಾ ರೈತ ಸಂಘದ ವಾರ್ಷಿಕ ಸಭೆಯು ಪಟ್ಟಣದ ಟಿ.ಎಂ.ಎಸ್.ಸಭಾಭವನದಲ್ಲಿ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ರೈತರ ಸಮಗ್ರ ಶ್ರೇಯೋಭಿವೃದ್ಧಿಯ ಕುರಿತು ಹಾಗೂ ರೈತರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಪರಿಹಾರದ ಕುರಿತು ಈ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
ಇತ್ತೀಚೆಗೆ ಪ್ರಸ್ತಾಪವಾದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಲಾಯಿತು. ಕಾಡು ಪ್ರಾಣಿಗಳಿಂದ ರೈತರ ಬೆಳೆಗಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ, ವಿಶೇಷವಾಗಿ ಕಾಡುಹಂದಿ ಮತ್ತು ಮಂಗಗಳ ಹಾವಳಿಯಿಂದ ಬೆಳೆಗಳು ನಷ್ಟವಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.
ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಫಸಲ್ ಭೀಮಾ ಯೋಜನೆಯ ಪರಿಹಾರ ಹಣವು ಸಕಾಲಕ್ಕೆ ಸರಿಯಾಗಿ ರೈತರಿಗೆ ಸಿಗುವಂತೆ ಆಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಂಘದ ಸದಸ್ಯರು ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು. ಸಂಘದ ಉಪಾಧ್ಯಕ್ಷ ವಿ.ಎನ್.ಗೇರಗದ್ದೆ, ಕಾರ್ಯದರ್ಶಿ ಎಲ್.ಪಿ. ಭಟ್ಟ ಗುಂಡ್ಕಲ್, ಪ್ರಮುಖರಾದ ಪಿ.ಜಿ.ಭಟ್ಟ ಬರಗದ್ದೆ, ಕೆ.ಟಿ.ಹೆಗಡೆ ಮುಂತಾದವರು ಇದ್ದರು. ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.