ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಾಗು ಶಿರಸಿ ಗ್ರಾಮೀಣ ಮಂಡಲ ವತಿಯಿಂದ ದೇವನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಕ್ಕೆ ಸೋಮವಾರ ತೋಟಗಾರಿಕಾ ಇಲಾಖೆ ಅಧಿಕಾರಿಗಳೊಡನೆ ಭೇಟಿ ನೀಡಿ ಮಳೆಯಿಂದಾಗಿ ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಲಾಯಿತು.

ಈ ವೇಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಮಾತನಾಡಿ ಈ ವರ್ಷ ಅತಿ ಹೆಚ್ಚು ಮಳೆ ಬಿದ್ದ ಹಿನ್ನೆಲೆಯಲ್ಲಿ ದೇವನಳ್ಳಿಗೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಾಗು ಶಿರಸಿ ಗ್ರಾಮೀಣ ಮಂಡಲ ವತಿಯಿಂದ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಬೇಸಿಗೆಯಲ್ಲೂ ಮಳೆ ಬೀಳುವ ಈ ಪ್ರದೇಶವು ಇದಾಗಿದ್ದು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದು.

ಇಲ್ಲಿನ ರೈತರ ತೋಟಗಳಲ್ಲಿರುವ ಅಡಿಕೆ ಮರಗಳಲ್ಲಿ ಬೆಳೆಯೇ ಇಲ್ಲ. ವಿಪರೀತ ಮಳೆಯಿಂದಾಗಿ ಅಡಿಕೆ ಬೆಲೆ ಸಂಪೂರ್ಣವಾಗಿ ಕೊಳೆ ರೋಗಕ್ಕೆ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ರೈತರ ಕಷ್ಟವನ್ನರಿತು ಸೂಕ್ತ ಪರಿಹಾರ ನೀಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಮೇಶ್ ನಾಯ್ಕ್ ಕುಪ್ಪಳ್ಳಿ ಮಾತನಾಡಿ, ಈ ಭಾಗದಲ್ಲಿ ಶೇಕಡಾ 90% ರಷ್ಟು ಬೆಳೆ ಹಾನಿ ಆಗಿದೆ. ಇದು ಕೇವಲ ಈ ಭಾಗದಲ್ಲಿ ಅಷ್ಟೇ ಅಲ್ಲ, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಬೆಳೆ ಹಾನಿ ಸಂಭವಿಸಿದೆ. ಸ್ಥಳೀಯ ಶಾಸಕರಾದ ಭೀಮಣ್ಣ ನಾಯ್ಕ್ ಹಾಗೂ ಶಾಸಕ ಶಿವರಾಮ್ ಹೆಬ್ಬಾರ್ ಹಾನಿಯಾದ ಅಡಿಕೆ ಬೆಳೆಗೆ ಸೂಕ್ತ ಪರಿಹಾರವನ್ನ ನೀಡುವಂತೆ ಸರ್ಕಾರಕ್ಕೆ ಗಮನವನ್ನು ಸೆಳೆದು, ರೈತರ ಸಮಸ್ಯೆಯನ್ನು ಬಗೆಹರಿಸುವತ್ತ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಈ ನಿಟ್ಟಿನಲ್ಲಿ ಬಿಜೆಪಿ ಬೆಳೆಹಾನಿ ಕುರಿತಾಗಿ ಸಮೀಕ್ಷೆ ನಡೆಸಿ ವರದಿಯನ್ನು ರಾಜ್ಯಕ್ಕೆ ಕಳಿಸಿಕೊಡುತ್ತೇವೆ. ಮತ್ತು ಸರಕಾರದ ಮೇಲೆ ಒತ್ತಡ ಹಾಕಿ ರೈತರಿಗೆ ನ್ಯಾಯ ಒದಗಿಸುವ ಪ್ರಯತ್ನ ನಮ್ಮಿಂದವಾಗುತ್ತದೆ ಎಂದರು.

ಮಾಜಿ ಜಿಪಂ ಸದಸ್ಯ ಆರದ.ಡಿ ಹೆಗಡೆ ಜಾನ್ಮನೆ ಮಾತನಾಡಿ, ರಾಜ್ಯ ಸರಕಾರ ವಿಶೇಷವಾಗಿ ಈ ಬೆಳೆಹಾನಿ ವಿಷ್ಯಕ್ಕೆ ಸಂಬಂಧಿಸಿ ಸಚಿವ ಸಂಪುಟದಲ್ಲಿ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಬೇಕು. ಕೇವಲ ರೈತರ ಕಣ್ಣುಕಟ್ಟಲು ಪರಿಹಾರ ನೀಡಿದರೆ ಪ್ರಯೋಜನ ದೊರೆಯದು ಎಂದರು.
ದೇವನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಮರಾಠಿ, ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಹೆಗಡೆ, ರೈತ ಸುನಿಲ್ ಭಟ್ ಮಾತನಾಡಿದರು.

ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿ ಸತೀಶ್ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಬೆಳೆಹಾನಿಯ ಸಂಪೂರ್ಣ ಮಾಹಿತಿ ಪಡೆದು, ಸರಕಾರಕ್ಕೆ ವಿಸ್ತ್ರತ ವರದಿ ಸಲ್ಲಿಸುವುದಾಗಿ ರೈತರಿಗೆ ಭರವಸೆ ನೀಡಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading