ಜಿಲ್ಲೆಯಲ್ಲಿನ ಎಲ್ಲಾ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿನಿಲಯಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಯಲ್ಲಿ ಸೂಚಿಸಿರುವಂತೆ ಎಲ್ಲಾ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿನಿಲಯಗಳು , ಕ್ರೀಡಾ ವಸತಿ ನಿಲಯಗಳು ಮತ್ತು ಸರಕಾರಿ ಕಚೇರಿಗಳಲ್ಲಿ 20 ಅಂಶಗಳ ತತ್ವಗಳನ್ನು ತಪ್ಪದೇ ಅನುಷ್ಠಾನಗೊಳಿಸಬೇಕು, ತಮ್ಮ ವ್ಯಾಪ್ತಿಯಲ್ಲಿರುವ ಮಕ್ಕಳ ಸುರಕ್ಷತೆ ಕುರಿತಂತೆ ನಿಗಧಿತವಾಗಿ ಸಭೆಗಳನ್ನು ನಡಿಸಿ, ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಯೋಜನೆಗಳು ಮತ್ತು ಕಾರ್ಯಕ್ರಮಗಳಡಿಯಲ್ಲಿ ಮಕ್ಕಳಿಗೆ ನಿಗಧಿಪಡಿಸಿರುವ ಅನುದಾನದ ಬಳಕೆ ಮತ್ತು ಸುರಕ್ಷತೆಗೆ ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ಅಂಕಿ ಆಂಶಗಳ ಸಹಿತ ವರದಿಯನ್ನು ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು , ಶಾಲಾ ಆವರಣದಲ್ಲಿ ಸಿಸಿಟಿವಿಗಳ ಅಳವಡಿಕೆ, ಮಕ್ಕಳ ದೂರು ಪೆಟ್ಟಿಗೆ ಅಳವಡಿಕೆ, ಮಕ್ಕಳ ಹಕ್ಕುಗಳಿಗೆ ಸಂಬಂದಪಟ್ಟ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು,

ಮಕ್ಕಳ ಉಚಿತ ಸಹಾಯವಾಣಿ 1098 ನ್ನು ಶಾಶ್ವತವಾಗಿ ಬರೆಸಬೇಕು, ವಿವಿಧ ಇಲಾಖೆಗಳಿಂದ ಮಕ್ಕಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಶೇ.100 ರಷ್ಟು ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದರು.
ಗ್ರಾಮಸಭೆಗಳು, ಶಾಲಾ ಸಲಹಾ ಪೆಟ್ಟಿಗೆ ಯಲ್ಲಿ ಸಲ್ಲಿಕೆಯಾಗುವ ಮಕ್ಕಳ ದೂರುಗಳನ್ನು ಕಡ್ಡಾಯವಾಗಿ ಗಂಭೀರವಾಗಿ ಪರಿಗಣಿಸಿ, ಆ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಸಂಬಂದಪಟ್ಟ ಇಲಾಖೆಗಳು ಅತ್ಯಂತ ಪರಿಣಾಮಕಾರಿಯಗಿ ಕಾರ್ಯನಿರ್ವಹಿಸಿ, ಆ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದರು.

ಜಿಲ್ಲೆಯಲ್ಲಿ ಸಂಪೂರ್ಣ ಮಕ್ಕಳ ಸ್ನೇಹಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವಲ್ಲಿ, ಎಲ್ಲಾ ಇಲಾಖೇಗಳು ಮಕ್ಕಳ ರಕ್ಷಣಾ ಆಯೋಗದ ಸೂಚಿಸಿರುವ ಎಲ್ಲಾ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತರಬೇತಿ ನಿರತ ಐ.ಎ.ಎಸ್ ಜಿಲ್ಲಾಧಿಕಾರಿ ಝೂಫಿಶಾನ್ ಹಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ನಟರಾಜ್ , ಡಿವೈಎಸ್ಪಿ ಗಿರೀಶ್, ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ ಉಪಸ್ಥಿತರಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading