ಯಕ್ಷಗಾನ, ತಾಳಮದ್ದಳೆ, ಭರತನಾಟ್ಯ, ಕೀರ್ತನೆ, ನಾಟಕ, ಭಜನೆ, , ಪುಸ್ತಕ ಬಿಡುಗಡೆ, ಭಗವದ್ಗೀತಾ ಪಠಣ, ಸಾಕರಿಗೆ ಸನ್ಮಾನ, ಆರೋಗ್ಯ ತಪಾಸಣಾ ಶಿಬಿರ ಮುಂತಾದ ನಾನಾ ಕಾರ್ಯಕ್ರಮಗಳನ್ನು ಒಳಗೊಂಡ ಸಂಕಲ್ಪ ಉತ್ಸವವು ಅ.31ರಿಂದ ನ.4ರ ವರೆಗೆ ಯಲ್ಲಾಪುರ ಪಟ್ಟಣದ ಗಾಂಧೀ ಕುಟೀರದಲ್ಲಿ ನಡೆಯಲಿದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಅವರು ಯಲ್ಲಾಪುರದಲ್ಲಿ ಬುಧವಾರ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಈ ವರ್ಷ 39 ನೇ ಸಂಕಲ್ಪ ಉತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.

ಸಂಕಲ್ಪ ಉತ್ಸವಕ್ಕೆ ರಾಜ್ಯದಲ್ಲಿಯೇ ವಿಶಿಷ್ಟವಾದ ಮತ್ತು ವಿಭಿನ್ನವಾದ ಉತ್ಸವ ಎಂಬ ಹೆಗ್ಗಳಿಕೆ ಇದೆ. ಅತ್ಯಂತ ದೀರ್ಘಕಾಲ ನಿರಂತರವಾಗಿ ಸಂಕಲ್ಪ ಉತ್ಸವವು ನಡೆದುಬಂದಿದೆ ಎಂದು ವಿವರಿಸಿದರು.

ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ, ಅ.31ರಂದು ಸಂಜೆ 4.30ರಿಂದ ಭಗವದ್ಗೀತಾ ಪಠಣದೊಂದಿಗೆ ಸಂಕಲ್ಪ ಉತ್ಸವವು ಆರಂಭವಾಗಲಿದೆ. 5.30ಕ್ಕೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಸಂಕಲ್ಪ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಎಡನೀರು ಮಠದ ಶ್ರೀಮದ್ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ನ.4ರವರೆಗೆ ಪ್ರತಿದಿನ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಶಿರಳಗಿ ಬ್ರಹ್ಮಾನಂದ ಶ್ರೀಗಳು, ಬಾರಕೂರಿನ ವಿಶ್ವಸಂತೋಷ ಭಾರತೀ ಶ್ರೀಗಳು, ನೆಲೆಮಾವು ಶ್ರೀಗಳು ಸಂಕಲ್ಪ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನ.4ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಸಂಘಟಕರಾದ ಸಿ.ಜಿ.ಹೆಗಡೆ, ಬಾಬು ಬಾಂದೇಕರ್ ಮುಂತಾದವರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading