ಬಿಹಾರ ಚುನಾವಣೆ ಫಲಿತಾಂಶ ಕೇವಲ ಒಂದು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶವಲ್ಲ, ಅದು ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಮೌನ ವಹಿಸುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ, ಸೋತಾಗ ಮತಯಂತ್ರದ ಮೇಲೆ ಆರೋಪ ಮಾಡುತ್ತಿದ್ದರು. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬಿಹಾರ ವೋಟ್ ಚೋರಿ ಎಂಬ ಹೊಸ ನಾಟಕ ಮಾಡಿ ಬಿಹಾರದ ಮತದಾರರ ದಿಕ್ಕು ತಪ್ಪಿಸುವ ಕುತಂತ್ರ ಮಾಡಿದ್ದರು. ಬಿಹಾರದ ಮತದಾರರು ಅಂತಿಮವಾಗಿ ಟೂಲ್ ಕಿಟ್ ನಿರ್ದೇಶಿತ ವೋಟ್ ಚೋರಿ ಅಪವಾದವನ್ನು ತಿರಸ್ಕರಿಸಿದ್ದಾರೆ.

ಎಂದಿನಂತೆ ಸಮಾಜ ಮತ್ತು ದೇಶ ಒಡೆಯುವ ಕಾಂಗ್ರೆಸ್ ತಂತ್ರದ ಭಾಗವಾಗಿ ಬಿಹಾರದಲ್ಲಿ ಮುಸ್ಲಿಂ/ಯಾದವ ಭಾಯಿ ಭಾಯಿ ಎಂಬ ಕೀಳುಮಟ್ಟದ ಘೋಷಣೆಯನ್ನು ರಾಹುಲ್ ಮೊಳಗಿಸಿದ್ದರು. ಅಂತಿಮವಾಗಿ ರಾಹುಲ್ ಒಡೆದು ಆಳುವ ನೀತಿಗೆ ತೀಲಾಂಜಲಿ ಇಟ್ಟ ಬಿಹಾರದ ಮತದಾರ, ಪ್ರಧಾನಿ ಮೋದಿಯವರ ಯುವಾ/ಮಹಿಳಾ ಒಗ್ಗಟ್ಟಿನ ಘೋಷಣೆಗೆ ಪುರಸ್ಕಾರ ನೀಡಿದ್ದಾರೆ.

ಈ ಬಾರಿ ಬಿಹಾರದಲ್ಲಿ ಅತಿಯಾದ ಮುಸ್ಲಿಂ ಓಲೈಕೆ ರಾಜಕಾರಣ ಮಣ್ಣುಮುಕ್ಕಿದ್ದು, ಮುಸ್ಲಿಂ ಬಾಹುಳ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ+ಜೆಡಿಯು ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿರುವುದು ಓಲೈಕೆ ರಾಜಕಾರಣದ ಯುಗಾಂತ್ಯ ಎಂಬುದು ಸ್ಪಷ್ಟವಾಗಿದೆ. ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಚಾತ್ ಪೂಜೆಯಲ್ಲಿ ಭಾಗವಹಿಸಿದ್ದನ್ನು ನಾಟಕ ಎಂದು ಕಾಂಗ್ರೆಸ್ ಮೂದಲಿಸಿದ್ದು, ಪ್ರಧಾನಿ ಮೋದಿ ಅವರ ಸ್ವರ್ಗಸ್ಥ ತಾಯಿಯನ್ನು ಚುನಾವಣಾ ರಾಜಕೀಯಕ್ಕೆ ಎಳೆದು ತಂದದ್ದು ಬಿಹಾರದ ಹಿಂದೂ ಮತಗಳ ಧ್ರುವೀಕರಣಕ್ಕೆ ಕಾರಣವಾಯಿತು.

ಬಿಹಾರ ಚುನಾವಣೆಯಲ್ಲಿ ಜಾತಿ ಮತ್ತು ಒಲೈಕೆ ರಾಜಕಾರಣದ ಮತ್ತು ಅಭಿವೃದ್ಧಿ ಆಧಾರಿತ ರಾಷ್ಟ್ರೀಯತೆ ಆಧಾರಿತ ರಾಜಕಾರಣದ ನೇರ ಹಣಾಹಣಿ ಆಗಿತ್ತುಜೆ ಅಂತಿಮವಾಗಿ ರಾಷ್ಟ್ರೀಯತೆ ಆಧಾರಿತ ಅಭಿವೃದ್ಧಿ ರಾಜಕಾರಣಕ್ಕೆ ಬಿಹಾರ ಮತದಾರ ಜೈಕಾರ ಹಾಕಿದ್ದಾನೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಹಾರದ ಮತದಾರರು ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ತಿರಸ್ಕರಿಸುವ ಮೂಲಕ ರಾಹುಲ್ ಗಾಂಧಿ ರಾಷ್ಟ್ರ ರಾಜಕಾರಣದಲ್ಲಿ ಅಪ್ರಸ್ತುತ ಎಂಬುದನ್ನು ಪುಷ್ಟೀಕರಿಸಿದೆ. ಹೀಗಾಗಿ ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಬಿಹಾರ ಚುನಾವಣಾ ಫಲಿತಾಂಶ ಮುಂದೆ ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂಬುದು ಸ್ಪಷ್ಟವಾಗಿದೆ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading