ಯಲ್ಲಾಪುರ ತಾಲೂಕಿನ ಉಮ್ಮಚಗಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನ.11ರ ರಾತ್ರಿ ಕಳ್ಳತನಕ್ಕೆ ಯತ್ನ ನಡೆಸಿ, ಬ್ಯಾಂಕಿಗೆ ಬೆಂಕಿ ಹಚ್ಚಿ ನಾಪತ್ತೆಯಾಗಿದ್ದ ಪ್ರಕರಣ ಆರೋಪಿಯಾಗಿರುವ ವ್ಯಕ್ತಿಯೊಬ್ಬ ತನ್ನನ್ನು ಹಿಡಿಯಲುಬಂದ ಯಲ್ಲಾಪುರ ಠಾಣೆಯ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ, ಪೊಲೀಸರ ಕರ್ತವ್ಯಕ್ಯೆ ಅಡ್ಡಿಪಡಿಸಿ, ನಂತರ ತನ್ನ ಹೊಟ್ಟೆಗೆ ತಾನೇ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಬೆಳಗಾವಿಯಲ್ಲಿ ನಡೆದಿದೆ.

ಮಂಗಳೂರಿನ ಮಹ್ಮದ್ ರಫೀಕ್ ಎಂಬಾತನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈತನನ್ನು ಹಿಡಿಯಲೆಂದು ಯಲ್ಲಾಪುರ ಠಾಣೆಯ ಪಿಎಸ್ಸೈ ರಾಜಶೇಖರ ವಂದಲಿ ಹಾಗೂ ಪಿಎಸ್ಸೈ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿ ಶಫೀ ಶೇಖ್ ಬೆಳಗಾವಿಗೆ ತೆರಳಿದ್ದರು.

ಆರೋಪಿ ಮಹ್ಮದ್ ರಫೀಕ್ ಬೆಳಗಾವಿ ನಗರದ ಖಾಸಬಾಗ ವಾಲಿ ಚೌಕದ ಹತ್ತಿರ ಇರುವ ವೋಡ್ಕಾ ಬಾರ್ ಸಮೀಪ ಇರುವುದನ್ನು ಗಮನಿಸಿ, ಪೊಲೀಸರು ಹಿಡಿಯಲು ಹೋದಾಗ ಮಹ್ಮದ್ ರಫೀಕ್ ತನ್ನ ಪ್ಯಾಂಟಿನ ಕಿಸೆಯಲ್ಲಿದ್ದ ಚಾಕುವನ್ನು ತೆಗೆದು ಚಾಕುವಿನಿಂದ ಪಿಎಸ್ಸೈ ರಾಜಶೇಖರ ವಂದಲಿ ಹಾಗೂ ಪಿಎಸ್ಸೈ ಸಿದ್ದಪ್ಪ ಗುಡಿ ಅವರಿಗೆ ಹಲ್ಲೆ ಮಾಡಲು ಯತ್ನಿಸಿದ್ದಾನೆ.

ಪೊಲೀಸರನ್ನು ನೂಕಿ ಪಿಎಸ್ಸೈ ರಾಜಶೇಖರ ವಂದಲಿಯವರ ಬಲಗೈಗೆ ಹಾಗೂ ಪಿಎಸ್ಸೈ ಸಿದ್ದಪ್ಪ ಗುಡಿ ಅವರ ಕಾಲಿಗೆ ಗಾಯಪಡಿಸಿದ್ದಾನೆ. ಹಿಡಿಯಲು ಬಂದ ಪೊಲೀಸ್ ಸಿಬ್ಬಂದಿ ಶಫೀ ಶೇಖ್ ಅವರಿಗೆ ಜೋರಾಗಿ ಒದ್ದು ಕಾಲಿಗೆ ಪೆಟ್ಟು ಮಾಡಿದ್ದಾನೆ.

ನಂತರ ತಪ್ಪಿಸಿಕೊಳ್ಳುವ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತನಗೆ ತಾನೇ ಚಾಕುವಿನಿಂದ ಮೂರ್ನಾಲ್ಕು ಬಾರಿ ತನ್ನ ಹೊಟ್ಟೆಗೆ ಚುಚ್ಚಿಕೊಂಡು ಗಾಯಪಡಿಸಿಕೊಂಡಿದ್ದಾನೆ. ಮಹ್ಮದ್ ರಫೀಕ್ ವಿರುದ್ಧ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading