ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಮಾತೃಭಾಷೆಯ ಜೊತೆ ಇಂಗ್ಲೀಷ್ ಭಾಷೆಯ ಕಲಿಕೆ ಹಾಗೂ ಕಂಪ್ಯೂಟರ್ ಶಿಕ್ಷಣದ ಕಲಿಕೆಯ ಅಗತ್ಯ ಇದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಶುಕ್ರವಾರ ಬೆಳಿಗ್ಗೆ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವದರ್ಶನ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮಗುವೂ ಶಿಕ್ಷಣ ಪಡೆಯುವ ಅಗತ್ಯವಿದೆ. ಬಡತನ, ನಾನಾ ಸಮಸ್ಯೆ, ಕಷ್ಟ ಏನೇ ಇದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಗುರಿಯನ್ನು ಪ್ರತಿಯೊಬ್ಬ ಪಾಲಕರೂ ಹೊಂದಿರುತ್ತಾರೆ. ಪಾಲಕರ ಆಶಯಕ್ಕೆ ತಕ್ಕಂತೆ ಮಕ್ಕಳು ಸುಶಿಕ್ಷಿತರಾಗಬೇಕು.

ಇಂದಿನ ಕಾಲದಲ್ಲಿ ವಿದೇಶದ ಉದ್ಯೋಗವನ್ನೂ ಕೂಡ ಮನೆಯಲ್ಲಿ ಕುಳಿತು ಮಾಡಬಹುದಾದ ಹೇರಳವಾದ ಅವಕಾಶ ಇದೆ. ಇದಕ್ಕೆ ಇಂಗ್ಲೀಷ್ ಭಾಷೆಯ ಪ್ರೌಢಿಮೆ ಮತ್ತು ಕಂಪ್ಯೂಟರ್ ಶಿಕ್ಷಣದಲ್ಲಿ ಕೌಶಲ್ಯತೆಯ ಅಗತ್ಯವಿದೆ ಎಂದ ಅವರು, ಸಮರ್ಪಣಾ ಮನೋಭಾವದಿಂದ ಇಂತಹ ಶಿಕ್ಷಣವನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಈ ಸಂಸ್ಥೆಯಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ನೀಡುವ ಜೊತೆಗೆ, ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ ಹಾಗೂ ಸರ್ವತೋಮುಖ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ. ಈಗಾಗಲೇ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಅನೇಕ ಮಹತ್ವಪೂರ್ಣವಾದ ಶೈಕ್ಷಣಿಕ ಸಾಧನೆಯಲ್ಲಿ ಮಾಡಿದ್ದಾರೆ.

ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸದ್ಯದಲ್ಲಿಯೇ ಸಿಇಟಿ, ನೀಟ್, ಜೆಇಇ ಮುಂತಾದ ಉನ್ನತ ಶಿಕ್ಷಣದ ತರಬೇತಿ ನೀಡುವ ಯೋಜನೆ ಇದೆ ಹಾಗೂ ವಸತಿ ಸೌಲಭ್ಯ ಹೊಂದಿದ ಪಿಯು ಕಾಲೇಜನ್ನು ಆರಂಭಿಸುವ ಪ್ರಕ್ರಿಯೆ ನಡೆದಿದೆ ಎಂದ ಅವರು, ಸಂಸ್ಥೆಯ ಸಾಧನೆ, ಧ್ಯೇಯೋದ್ದೇಶಗಳ ಬಗ್ಗೆ ಮಾತನಾಡಿದರು.

ವಿಶ್ವದರ್ಶನ ಸಂಸ್ಥೆಯನ್ನು ಯಲ್ಲಾಪುರದಲ್ಲಿ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ದಿ.ಉಮೇಶ ಭಟ್ಟ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಯಾವುದೇ ಆಧುನಿಕ ಸೌಕರ್ಯ ಇಲ್ಲದ ಕಾಲದಲ್ಲಿ ಉಮೇಶ ಭಟ್ಟ ಅವರು ಈ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸಾವಿವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ಮಹನೀಯರ ನೆನಪನ್ನು ಚಿರಸ್ಥಾಯಿಯಾಗಿಸುವ ಕೆಲಸ ಆಗಬೇಕು- ಶಿವರಾಮ ಹೆಬ್ಬಾರ ಶಾಸಕ

ವಿಶ್ವದರ್ಶನ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ದಿ.ಉಮೇಶ ಭಟ್ಟ ಅವರು ಸಂಸ್ಥೆಯ ಅಭಿವೃದ್ಧಿಗೆ ಬೀಜಾಂಕುರ ಮಾಡಿದ್ದಾರೆ. ಅವರನ್ನು ನಾವು ಸದಾ ಸ್ಮರಿಸುತ್ತೇವೆ. ಸಂಸ್ಥೆಯ ಆವರಣದಲ್ಲಿ ಉಮೇಶ ಭಟ್ಟ ಅವರ ಪ್ರತಿಮೆಯನ್ನು ಸ್ಥಾಪಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ: ಹರಿಪ್ರಕಾಶ ಕೋಣೆಮನೆ

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಸ್ತುಪ್ರದರ್ಶನ ಮಳಿಗೆಗಳನ್ನು ಹಾಗೂ ವಿವಿಧ ವಸ್ತುಗಳ ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಾಯಿತು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಪಿಎಸ್ಸೈ ರಾಜಶೇಖರ ವಂದಲಿ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಪಿ.ಜಿ.ಭಟ್ಟ ಬರಗದ್ದೆ, ರಘುನಂದನ ಭಟ್ಟ, ಮಾಲತೇಶ ಗೌಳಿ, ವಿಘ್ನೇಶ್ವರ ಗಾಂವ್ಕಾರ್, ವೆಂಕಟ್ರಮಣ ಬೆಳ್ಳಿ, ಟಿ.ಶಂಕರ ಭಟ್ಟ, ನಂದು ಗಾಂವ್ಕಾರ್ ಮುಂತಾದವರು ಇದ್ದರು. ಮುಖ್ಯಾಧ್ಯಾಪಕಿ ಮಹಾದೇವಿ ಭಟ್ಟ ಸ್ವಾಗತಿಸಿದರು. ಶಿಕ್ಷಕರಾದ ಆಸ್ಮಾ ಶೇಖ್ ನಿರ್ವಹಿಸಿದರು. ಸಂಕರ್ಷಣ ಭಟ್ಟ ವರದಿ ವಾಚಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading