ನೈತಿಕತೆ ಮತ್ತು ಸೃಜನಶೀಲತೆ ಬೆಳೆಸಿಕೊಳ್ಳಿ : ಜಿ. ಐ. ಹೆಗಡೆ
ವಿದ್ಯಾರ್ಥಿಗಳು ಇಂದಿನ ಪರಿಸ್ಥಿತಿಯಲ್ಲಿ ಕೇವಲ ಕೃತಕತೆಯನ್ನು ಮೈಗೂಡಿಸಿಕೊಂಡಿದ್ದಾರೆ, ಬದಲಾಗಿ ನೈತಿಕತೆ ಮತ್ತು ಸೃಜನಶೀಲತೆ ಬೆಳೆಸಿಕೊಂಡರೆ ಬದುಕು ಸುಲಭವಾಗುತ್ತದೆ ಎಂದು ಕಾಳಿಕಾ ಭವಾನಿ ಪ್ರೌಢ ಶಾಲೆಯ ಪ್ರಾಚಾರ್ಯ ಜಿ. ಐ. ಹೆಗಡೆ ಅಭಿಪ್ರಾಯಪಟ್ಟರು.
ಅವರು ಸಿದ್ದಾಪುರ ಪಟ್ಟಣದ ಶಿಕ್ಷಣ ಪ್ರಸಾರಕ ಸಮಿತಿಯ ಚೇತನಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರಾಜು ಭಟ್ಟ ಮಾತನಾಡಿ ವಿದ್ಯಾರ್ಥಿಗಳು ಇದ್ದದ್ದನ್ನು ಇದ್ದಹಾಗೆ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಆಗ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚೇತನಾ ವಿಜ್ಞಾನ ಕಾಲೇಜಿನ ನಿರ್ದೇಶಕರಾದ ಮುಕುಂದ ಗೋಖಲೆ, ಬಾಲಕೃಷ್ಣ ನಾಯ್ಕ, ಎಮ್.ಎಸ್.ಭಟ್ಟ ಆಗಮಿಸಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.
ಉಪನ್ಯಾಸಕಿ ಮೇಘನಾ ಎಂ.ಸ್ವಾಗತಿಸಿದರು. ಪ್ರತಿಮಾ ನಾಯ್ಕ ವರದಿ ವಾಚಿಸಿದರು. ಉಪನ್ಯಾಸಕಿ ಶಿಲ್ಪಾ ಭಟ್ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕರಾದ ಗೋಪಾಲ ಬಿ. ಹಾಗೂ ಮುಸ್ಕಾನ್ ಸೌದಾಗರ ಪ್ರಶಸ್ತಿ ವಿತರಣೆ ನಡೆಸಿಕೊಟ್ಟರು. ವಿದ್ಯಾರ್ಥಿ ಸಮರ್ಥ ನಾಯ್ಕ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಕ್ಕಾಗಿ ಸನ್ಮಾನಿಸಿ ಶುಭಹಾರೈಸಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಉಪನ್ಯಾಸಕ ವಿಘ್ನೇಶ್ವರ ಭಟ್ಟ ನಿರೂಪಿಸಿದರು. ಉಪನ್ಯಾಸಕಿ ಸ್ವಾತಿ ಹೆಗಡೆ ವಂದಿಸಿದರು. ಸೃಜನ್ ಹಾಗೂ ರಘು ಅವರ ನಿರೂಪಣೆಯೊಂದಿಗೆ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಹಾಗೂ ಸಾರ್ವಜನಿಕರು ಹಾಜರಿದ್ದರು.