ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಸುಮಾ ಹೆಗಡೆಯವರ ಪುತ್ರಿ, ಭರತನಾಟ್ಯ ಕಲಾವಿದೆ ವಿದುಷಿ ಕೃಪಾ ಹೆಗಡೆಯವರ ಭರತನಾಟ್ಯ ರಂಗಪ್ರವೇಶ ಸಮಾರಂಭವು ಯಲ್ಲಾಪುರ ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಕೃಪಾ ಹೆಗಡೆಯವರ ಭರತನಾಟ್ಯ ಪ್ರದರ್ಶನವು ಪ್ರೇಕ್ಷಕರ ಮನಗೆದ್ದಿತು.

ಭರತನಾಟ್ಯ ರಂಗಪ್ರವೇಶ ಸಮಾರಂಭದಲ್ಲಿ ಖ್ಯಾತ ಸಿನಿಮಾ ನಟ ನೀರ್ನಳ್ಳಿ ರಾಮಕೃಷ್ಣ , ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಉಪನ್ಯಾಸಕ ಡಾ.ಶ್ರೀಧರ ಭಟ್ಟ ಉಜಿರೆ, ಹವ್ಯಕ ಮಹಾ ಸಭೆಯ ನಿರ್ದೇಶಕ ಜಿ.ಎಂ.ಭಟ್ ಕಾಜಿನಮನೆ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಪತ್ರಕರ್ತರಾದ ಜಿ.ಎನ್.ಭಟ್ಟ ತಟ್ಟಿಗದ್ದೆ, ಶಂಕರ ಭಟ್ಟ ತಾರಿಮಕ್ಕಿ, ವಿದುಷಿ ಸುಮಾ ಹೆಗಡೆ, ವಿ.ಟಿ.ಹೆಗಡೆ, ನೃತ್ಯ ಗುರು ಎಂ.ಗೋಪಾಲ, ನಿರಂಜನ ಭಟ್ಟ ಬೆಂಗಳೂರು, ವಿದುಷಿ ಸೀಮಾ ಭಾಗ್ವತ್ ಮುಂತಾದವರು ಪಾಲ್ಗೊಂಡಿದ್ದರು.

ಸಮಾರಂಭವನ್ನು ಉದ್ಘಾಟಿಸಿದ ಖ್ಯಾತ ಸಿನಿಮಾ ನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ಭರತನಾಟ್ಯವು ಶ್ರೇಷ್ಠವಾದ ಭಾರತೀಯ ಕಲೆಯಾಗಿದೆ, ನಟರಾಜನ ಹೆಜ್ಜೆ ಎಂಬ ಪ್ರತೀತಿ, ಇಂತಹ ಮೇರು ಕಲಾ ಪ್ರಕಾರವನ್ನು ಆರಾಧಿಸುತ್ತಾ ನಮ್ಮ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಸುಮಾ ಹೆಗಡೆ ಮತ್ತು ಕೃಪಾ ಹೆಗಡೆಯವರ ಪ್ರಯತ್ನ ಶ್ಲಾಘನೀಯವಾಗಿದೆ,

ತಾಯಿಯೇ ಗುರುವಾಗಿ ಮಗಳಿಗೆ ಭರತನಾಟ್ಯ ಕಲೆಯನ್ನು ಬಳುವಳಿಯಾಗಿ ನೀಡಿರುವುದು ಮತ್ತು ನಿರಂತರವಾಗಿ ಈ ಕಲೆಯನ್ನು ಆರಾಧಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಇದು ಬಹಳ ಅಪರೂಪದ ಕಾರ್ಯಕ್ರಮ, ವಿದುಷಿ ಸುಮಾ ಹೆಗಡೆಯವರು ಯಲ್ಲಾಪುರದಂತಹ ಸಣ್ಣ ಊರಿನಲ್ಲಿ 25 ವರ್ಷಗಳಿಂದ ಕಲಾ ಸೇವೆಯ ಮೂಲಕವಾಗಿ, ಭರತನಾಟ್ಯ ಶಿಕ್ಷಣ ನೀಡುತ್ತಾ ನೂರಾರು ಕಲಾವಿದರನ್ನು ಸೃಷ್ಟಿಸುತ್ತಿದ್ದಾರೆ,

ಸುಮಾ ಅವರ ಸಾಧನೆಯ ಹಿಂದೆ ಅವರ ಪತಿ ವಿ.ಟಿ.ಹೆಗಡೆ ಹಾಗೂ ಕುಟುಂಬದವರ ಕೊಡುಗೆ ಅಪಾರವಾಗಿದೆ, ಯಾವುದೇ ಸಾಧನೆಗೆ ಅವಕಾಶ ಹಾಗೂ ಬೆಂಬಲ ಅಗತ್ಯ, ಮುಂದಿನ ತಲೆಮಾರಿನವರಿಗೆ ಇದು ಕಲಾ ಪ್ರೇರಣೆ ನೀಡುತ್ತಿದೆ. ಮಹೋನ್ನತವಾದ ಈ ಕಲೆಯನ್ನು ಜಗತ್ತಿಗೆ ಪಸರಿಸುವ ಕೆಲಸ ಇವರಿಂದ ಆಗುತ್ತಿದೆ, ಭವಿಷ್ಯದ ಭರವಸೆ ಮೂಡಿಸುತ್ತಿದೆ. ಕಲೆಯು ಮನರಂಜನೆಗೆ ಮಾತ್ರವಲ್ಲ ಮನುಷ್ಯತ್ವವನ್ನು ರೂಪಿಸುತ್ತದೆ ಎಂದರು.

ಭಾರತೀ ನೃತ್ಯ ಕಲಾಕೇಂದ್ರದ ಮುಖ್ಯಸ್ಥ ವಿ.ಟಿ.ಹೆಗಡೆ ತೊಂಡೆಕೆರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮತನಾಡಿ, ಭರತನಾಟ್ಯವನ್ನು ಐದನೇ ವೇದ ಎಂದು ಕರೆಯುತ್ತಾರೆ. ಈ ಕಲೆಗೆ ಗುರು ಶಿಷ್ಯ ಪರಂಪರೆ ಇದೆ, ಭರತನಾಟ್ಯ ರಂಗಪ್ರವೇಶ ಎನ್ನುದು ಕಲಾ ಬದುಕಿನ ಪ್ರಮುಖ ಘಟ್ಟವಾಗಿದೆ ಎಂದರು.

ಗಣೇಶ ಪೂಜೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು.

ಸುಮಾ ಹೆಗಡೆಯವರು ಕೃಪಾ ಹೆಗಡೆಯವರಿಗೆ ನೂಪುರ ಪ್ರದಾನ, ವಸ್ತ್ರ ಪ್ರದಾನ ಮಾಡಿದರು.

ವಿದುಷಿ ಕೃಪಾ ಹೆಗಡೆ ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ಶಬ್ದಂ, ವರ್ಣಂ, ದೇವರನಾಮ, ಅಷ್ಟಪದಿ,ತಿಲ್ಲಾನ ಮುಂತಾದ ಭರತನಾಟ್ಯ ಕಲಾಪ್ರಕಾರವನ್ನು ಆಕರ್ಷಕವಾಗಿ ಪ್ರದರ್ಶಿಸಿದರು.

ಮಂಜುನಾಥ ಎನ್ ಪುತ್ತೂರು ನೃತ್ಯ ನಿರ್ದೇಶನ ನೀಡಿದರು.

ನಟುವಾಂಗದಲ್ಲಿ ವಿದುಷಿ ಸುಮಾ ವೆಂಕಟ್ರಮಣ, ಹಾಡುಗಾರಿಕೆಯಲ್ಲಿ ವಿ.ಬಾಲಸುಬ್ರಹ್ಮಣ್ಯ ಬೆಂಗಳೂರು, ಮೃದಂಗವಾದನದಲ್ಲಿ ವಿ.ವೇಣುಗೊಪಾಲ ಬೆಂಗಳೂರು, ಕೊಳಲಿನಲ್ಲಿ ವಿ.ದೀಪಕ ಹೆಬ್ಬಾರ್ ಬೆಂಗಳೂರು, ರಿದಮ್ ಪ್ಯಾಡ್ ನಲ್ಲಿ ವಿ. ರಾಘವೇಂದ್ರ ರಂಗದೋಳ್ ಶಿವಮೊಗ್ಗ ಪಾಲ್ಗೊಂಡರು.

ಉತ್ತಮ ಧ್ವನಿ, ಬೆಳಕು, ರಂಗಸಜ್ಜಿಕೆಯ ಸಂಯೋಜನೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು. ನೂರಾರು ಕಲಾ ಪ್ರೇಕ್ಷಕರು ಸಮಾರಂಭಕ್ಕೆ ಆಗಮಿಸಿ ಭರತನಾಟ್ಯವನ್ನು ವೀಕ್ಷಿಸಿ ಸಂತಸಪಟ್ಟರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading