ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಇಲಾಖೆ ವತಿಯಿಂದ ಸುಮಾರು ರೂ. 21 ಸಾವಿರಕ್ಕೂ ಕೋಟಿ ಗೂ ಅಧಿಕ ಮೊತ್ತದ ಕಾಮಗಾರಿಗಳು ವಿವಿಧ ಹಂತದಲ್ಲಿ ನಡೆಯುತ್ತಿವೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಅವರು ಶನಿವಾರ ಕಾರವಾರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಮಾತನಾಡಿದರು.

ಮಲೆನಾಡು ಮತ್ತು ಬಯಲು ಸೀಮೆಯನ್ನು ಜೋಡಿಸುವ ಉದ್ದೇಶದಿಂದ ತಾಳಗುಪ್ಪ-ಶಿರಸಿ-ಹುಬ್ಬಳಿ 158 ಕಿ.ಮೀ ಉದ್ದದ ಹೊಸ ಮಾರ್ಗವು ರೈಲ್ವೆ ಮಂಡಳಿಯಲ್ಲಿ ಅನುಮೋದನೆಯಾಗಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆಯಾಗಬೇಕಿದೆ. ಈ ಯೋಜನೆ ಮತ್ತು ತಾಳಗುಪ್ಪ ಹೊನ್ನಾವರ ಹೊಸ ಮಾರ್ಗಕ್ಕೆ ಒಟ್ಟು ಸುಮಾರು 21 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಗೋಕರ್ಣ ಮತ್ತು ಹೊನ್ನಾವರ ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾಮಗಾರಿ ಪ್ರಾರಂಭವಾಗಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಬ್ಬಳ್ಳಿ- ಅಂಕೋಲಾ ನಡುವಿನ 164 ಕಿ.ಮೀ ಉದ್ದದ ನೂತನ ಯೋಜನೆಯನ್ನು 16,500 ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಈಗಾಗಲೇ ಸರ್ವೇ, ಡಿಪಿಆರ್, ಫಾರೆಸಟ್ ಕ್ಲಿಯರೆನ್ಸ್ ಕೂಡ ಮುಕ್ತಾಯಗೊಂಡಿದ್ದು, ವನ್ಯಜೀವಿ ಕ್ಲಿಯರೆನ್ಸ್ ಬಾಕಿ ಇದೆ. ಇನ್ನು 5-6 ತಿಂಗಳಿನೊಳಗೆ ಇದಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟಗಳಿಗೆ ಯಾವುದೇ ರೀತಿಯಲ್ಲಿ ಅನಾನುಕುಲವಾಗುವುದಿಲ್ಲ ಎಂದ ಅವರು, ಸುಮಾರು 1997-98 ರಲ್ಲಿ ಆರಂಭಿಸಿದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕಲ್ಲಘಟಗಿವರೆಗೆ ಮಾಡಲಾಗಿದ್ದು, ಕೆಲವು ಕಾರಣಗಳಿಂದ ನಿಂತುಹೊಗಿದ್ದು, ಈ ಯೋಜನೆಗೆ 2530 ಎಕರೆ ಜಾಗ ಬೇಕಿದೆ ಎಂದರು.

ಕೊಂಕಣ ರೈಲ್ವೆಯ ವಿಲೀನ ಪ್ರಕ್ರಿಯೆ ಚರ್ಚೆಯ ಹಂತದಲ್ಲಿದ್ದು, ಅವುಗಳ ಆಗುಹೋಗಗಳ ಬಗ್ಗೆ ಚರ್ಚಿಸಲಾಗುತ್ತಿದೆ. ರೈಲ್ವೆಯ ಬಹುತೇಕ ರೈಲು ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದ್ದು, ಕೊಂಕಣ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ. ದಾಂಡೇಲಿಯ ಅಂಬೇವಾಡಿಗೆ ಮುಂದಿನ ತಿಂಗಳನಿಂದ ರೈಲ್ವೆ ಸಂಚಾರ ಪ್ರಾರಂಭಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ರೈಲ್ವೆ ಮೆನೇಜರ್ ಆಶಾ ಶೆಟ್ಟಿ, ಮುಖ್ಯ ಇಂಜಿನಿಯರ್ ಪ್ರಕಾಶ್, ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕ ದಿಲೀಪ್ ಡಿ ಭಟ್, ಹಿರಿಯ ಇಂಜಿನಿಯರ್ ಉದಯ ಭಾಸ್ಕರ್, ,ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಹಿರಿಯ ಪ್ರಾದೇಶಿಕ ಆರ್ಥಿಕ ಸಲಹೆಗಾರ ಪ್ರದೀಪ್ ಬಾಳಿಗ ಮತ್ತಿತರರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading