ಹೆಣ್ಣುಮಕ್ಕಳು ವೇಷಭೂಷಣ, ಶರೀರದ ಸೌಂದರ್ಯಕ್ಕೆ ಆದ್ಯತೆ ನೀಡದೇ ನಮ್ಮ ಅಂತಃಶಕ್ತಿ ಜಾಗೃತಗೊಳಿಸುತ್ತ ನಡೆ-ನುಡಿಯನ್ನು ಉತ್ತಮಗೊಳಿಸಿಕೊಂಡು ದೇಶಕ್ಕೆ ಉಪಯೋಗವಾಗುವಂತೆ ಬದುಕಬೇಕು. ಸ್ತ್ರೀ ಮನೆಯ ಭದ್ರ ಅಡಿಪಾಯ. ಮನೆಯ ಕಳೆ ಆ ಮನೆಯ ಹೆಣ್ಣುಮಕ್ಕಳಿಂದ ಬೆಳಗುತ್ತದೆ. ದೇಶ, ಸಂಸ್ಕೃತಿಉಳಿಯಬೇಕಾದರೆ ಸ್ತ್ರೀಯರ ಕೊಡುಗೆ ಬಹುಮುಖ್ಯ ಎಂದು ಖ್ಯಾತ ವಾಗ್ಮಿ, ಬರಹಗಾರ್ತಿ ಡಾ.ಆರತಿ ವಿ.ಬಿ. ಹೇಳಿದರು.
90ನೇ ವರ್ಷದ ಸಂಭ್ರಮದಲ್ಲಿರುವ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಆವಾರದಲ್ಲಿ ಆಯೋಜಿಸಲಾಗಿದ್ದ ತಾರುಣ್ಯಸಿಂಧು ಶಕ್ತಿ-ಯುಕ್ತಿಗಳ ಸಮ್ಮಿಲನ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಉಪಸ್ಥಿತರಿದ್ದು, ಮಾತನಾಡಿದರು. ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಮಂಡಲ, ವಿದ್ಯುತ್ ಶಕ್ತಿಯಂತಹ ಇಚ್ಛಾಶಕ್ತಿ ಯುವಜನಾಂಗಕ್ಕೆ ಇದ್ದಾಗ ಜೀವನದಲ್ಲಿ ಬರುವಂತಹ ಕಷ್ಟಗಳನ್ನು ಎದುರಿಸಲು ಸಾಧ್ಯ. ಬಣ್ಣದ ಮಾತುಗಳಿಗೆ ಮಾರು ಹೋಗದೇ, ನಿಜವಾಗಿ ಪ್ರೀತಿಸುವ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸಬೇಕು.
ಆಧುನಿಕತೆಗೆ ಮಾರು ಹೋಗಿ ಜೀವನ ವ್ಯರ್ಥ ಮಾಡಿಕೊಳ್ಳಬಾರದು ಎಂದರು. ಇಸ್ರೋ ಕಛೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸ್ತ್ರೀ ವಿಜ್ಞಾನಿಗಳು, ಸೀರೆ, ಕುಂಕುಮ, ಭಾರತೀಯ ಉಡುಗೆ ಧರಿಸಿದ್ದನ್ನು ಕಂಡು ಆಶ್ಚರ್ಯವೆನಿಸಿತು. ಅಂತಹ ಉನ್ನತವಾದ ಹುದ್ದೆಯಲ್ಲಿ, ಜವಾಬ್ದಾರಿಯಲ್ಲಿದ್ದರೂ ಅವರ್ಯಾರೂ ನಮ್ಮ ಮೂಲವನ್ನು ಮರೆತಿಲ್ಲ. ಆದರೆ ದುರದೃಷ್ಟವೇನೆಂದರೆ ಇಂದಿನ ಯುವತಿಯರು ಬೆಂಗಳೂರು ಎಂ.ಜಿ ರಸ್ತೆಯಲ್ಲಿ ಅರ್ಧ ಬಟ್ಟೆ ಹಾಕಿಕೊಂಡು ಓಡಾಡುವುದನ್ನು ನೋಡಿದಾಗ ಯುವಜನತೆ ಎತ್ತಕಡೆ ಸಾಗುತ್ತದೆ ಎಂದು ಆತಂಕವಾಗುತ್ತದೆ.
ನಮ್ಮ ಪ್ರಾಚೀನರು ಸಂಸ್ಕೃತ, ಮಾತೃಭಾಷೆ, ಸಂಸ್ಕೃತಿ, ಮೌಲ್ಯಗಳೆ ಬದುಕಿನ ಉದ್ದೇಶವಾಗಿತ್ತು. ಆದರೆ ನಾವು ಕಸದ ರಾಶಿಯಾಗಿರುವ ಬಾಲಿವುಡ್ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ನಮಗೆ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಚೆನ್ನಭೈರಾದೇವಿ ಇಂತಹವರು ಆದರ್ಶರಾಗಬೇಕೇ ಹೊರತು ಮೌಲ್ಯವನ್ನು ನಾಶಮಾಡುವ ವ್ಯಕ್ತಿಗಳು ನಮಗಾದರ್ಶವಾಗಬಾರದು. ನಮ್ಮನ್ನು ಯಾವ ರೀತಿಯಲ್ಲಿ ಸಮಾಜ ನೋಡುತ್ತಿದೆ, ಯಾರು ಗಮನಿಸುತ್ತಿದ್ದಾರೆ ಎಂಬ ಅರಿವಿರಬೇಕು. ಎಚ್ಚರಗೇಡಿತನವಿರಬಾರದು ಎಂದರು.
ರಾಷ್ಟ್ರ ಸೇವಿಕಾ ಸಮಿತಿ ಶಿರಸಿ ಜಿಲ್ಲಾ ಕಾರ್ಯವಾಹಿಕಾ ಶ್ರೀದೇವಿ ದೇಶಪಾಂಡೆ ಮಾತನಾಡಿ, ಕಳೆದ 90 ವರ್ಷದಿಂದ ಸಮಿತಿ ರಾಷ್ಟ್ರಾದ್ಯಂತ ಹೆಣ್ಣುಮಕ್ಕಳನ್ನು ಎಲ್ಲಾ ರೀತಿಯಿಂದಲೂ ಸಮರ್ಥವಾಗಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಹೆಣ್ಣುಮಕ್ಕಳು ದೇಶದ ಆಸ್ತಿಯಾಗಬೇಕು ಎಂದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಎಂಬ್ರಿಯೊಲೊಜಿಸ್ಟ್ ಡಾ.ಜಲಜಾ ಕಣ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವತಿಯರು ಆಧುನಿಕತೆಗೆ ಮಾರುಹೋಗದೇ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು, ಉತ್ತಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಹೇಳಿದರು.
ಸಾಮಾಜಿಕವಾಗಿ ಪಿಡುಗುಗಳೆಂದೇ ಬಿಂಬಿತವಾಗಿರುವ ಹಲವು ವಿಷಯಗಳ ಬಗೆಗೆ ಯುವತಿಯರು ರೂಪಕವನ್ನು ಪ್ರಸ್ತುತಿಪಡಿಸಿದರು. ಮುಕ್ತಾ ಶಂಕರ, ಚಂದ್ರಕಲಾ, ಸುಜಾತಾ ಹೆಗಡೆ, ಅಪರ್ಣಾ ಗಟ್ಟಿ ಮುಂತಾದವರು ಇದ್ದರು. ನಂದಿನಿ ರಾಯಾಪುರ್ ಸ್ವಾಗತಿಸಿದರು. ವಿನಯಶ್ರೀ ಹಾಗೂ ಸಂಧ್ಯಾ ವಿಷ್ಣು ನಿರೂಪಿಸಿದರು.